ಬಳ್ಳಾರಿ: ವೈಕುಂಠ ಏಕಾದಶಿ ನಿಮಿತ್ತ ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀ ವೆಂಕಟೇಶ್ವರ ದೇವರ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಶ್ರೀ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ನಗರದ ಮುನ್ಸಿಪಲ್ ಹೈಸ್ಕೂಲ್ ಬಳಿಯ ವೆಂಕಟೇಶ್ವರ ದೇವಾಲಯ, ರಾಮೇಶ್ವರ ದೇವಾಲಯ, ಪಟೇಲ್ ನಗರದಲ್ಲಿನ ವೆಂಕಟೇಶ್ವರ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಸ್ವಾಮಿಯ ದರ್ಶನಕ್ಕೆ ಹರಿದು ಬಂದ ಭಕ್ತಾದಿಗಳಿಗೆ ಲಡ್ಡು ಪ್ರಸಾದ ವಿತರಿಸಲಾಯಿತು. ದೇವಸ್ಥಾನಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.