ಭಾರತ ಕೆನಡಾ ಪಂದ್ಯ ನಡೆಯುವುದು ಡೌಟ್ ಎನ್ನಲಾಗಿದೆ. ಫ್ಲೋರಿಡಾದ ಸೆಂಟ್ರಲ್ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ನಲ್ಲಿ ಇಂದು ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಫ್ಲೋರಿಡಾದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಇಂದು ಸಹ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ಅಕ್ಯುವೆದರ್ ಹವಾಮಾನ ವರದಿ ಪ್ರಕಾರ, ಈ ಪಂದ್ಯದ ಸಮಯದಲ್ಲಿ 35%-45% ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಇಂದು ಫ್ಲೋರಿಡಾದ ಸುತ್ತ ಮುತ್ತ 50% ಗುಡುಗು ಸಹಿತ ಮಳೆಯಾಗಲಿದೆ. ಮಧ್ಯಾಹ್ನದ ಸಮಯದಲ್ಲಿ ತಾಪಮಾನವು ಸುಮಾರು 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಶೇ.80 ರಷ್ಟು ತೇವಾಂಶವು ಹೊಂದಿರಲಿದೆ ಎಂದು ತಿಳಿಸಿದೆ.
ಗೂಗಲ್ ಹವಾಮಾನ ವರದಿಯು ಬೆಳಿಗ್ಗೆ ಶೇ.30 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದು ಪಂದ್ಯದ ಉದ್ದಕ್ಕೂ ಸ್ಥಿರವಾಗಿರಲಿದೆ.
ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಆಡಿದ 3 ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಈ ಮೂಲಕ ಒಟ್ಟು 6 ಅಂಕಗಳನ್ನು ಕಲೆಹಾಕಿದೆ. ಈ ಆರು ಅಂಕಗಳೊಂದಿಗೆ ಈಗಾಗಲೇ ಸೂಪರ್-8 ಹಂತಕ್ಕೇರಿದೆ. ಹೀಗಾಗಿ ಕೆನಡಾ ವಿರುದ್ಧದ ಇಂದಿನ ಪಂದ್ಯವು ರದ್ದಾದರೂ ಭಾರತ ತಂಡಕ್ಕೆ ಯಾವುದೇ ತೊಂದರೆಯಿಲ್ಲ.