ಬೆಳಗಾವಿ: ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಬೇಕು. ಟಿಪ್ಪುವಿನ ಹೆಸರು ಶೌಚಾಲಯಗಳಿಗೆ ಇಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಮಾತನಾಡಿದ ಯತ್ನಾಳ್, ಟಿಪ್ಪು ಒಬ್ಬ ಮತಾಂಧ. ನಾಲ್ಕು ಸಾವಿರ ದೇವಸ್ಥಾನ ಧ್ವಂಸ ಮಾಡಿದವ. ಅವನ ಖಡ್ಗದ ಮೇಲೆ ಕಾಫೀರರನ್ನು (ಮುಸ್ಲಿಮರಲ್ಲದವರು) ಕೊಲೆ ಮಾಡಿ ಎಂದು ಬರೆದಿತ್ತು. ಇಂತಹ ಒಬ್ಬ ಮತಾಂಧ ಟಿಪ್ಪು ಹೆಸರನ್ನ ಬೇಕಾದರೇ ಶೌಚಾಲಯಗಳಿಗೆ ಇಡಲಿ ಎಂದು ಕುಟುಕಿದರು.
ವೀರ ಸಾವರ್ಕರ್ ಭಾವಚಿತ್ರ ತೆರವು ಮಾಡಬೇಕು ಎನ್ನುವ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 10 ಖರ್ಗೆಗಳು ಬಂದರೂ ಸಾವರ್ಕರ್ ಫೋಟೋ ತೆಗೆಯಲು ಆಗುವುದಿಲ್ಲ. ಸಾವರ್ಕರ್ ಫೋಟೋ ತೆಗೆದು ನೆಹರೂ ಫೋಟೋ ಹಚ್ಚಿದರೆ ನಾವು ಅದನ್ನೂ ತೆಗೆಯುತ್ತೇವೆ ಎಂದು ಎಚ್ಚರಿಸಿದರು. ರಾಜ್ಯದ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ವೀರರಾಣಿ ಚೆನ್ನಮ್ಮ, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಮತ್ತು ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣ ಅವರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಣಯಿಸಲಾಯಿತು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕು ಎಂದು ಕಾಂಗ್ರೆಸ್ನ ಅಬ್ಬಯ್ಯ ಪ್ರಸಾದ್ ಹೇಳಿದ್ದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
