ಟಾಲಿವುಡ್ನಲ್ಲಿ ನಟ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಡೇಟಿಂಗ್ ಕುರಿತು ಸಾಕಷ್ಟು ಸಮಯದಿಂದ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಈ ಜೋಡಿಯ ಮದುವೆಯ ಬಗ್ಗೆ ಸುದ್ದಿಯಾಗಿತ್ತು. ಈ ವರ್ಷ ಹಸೆಮಣೆ ಏರಲಿದ್ದಾರೆ ಎಂದೇ ಹೇಳಲಾಗಿತ್ತು. ಇದೀಗ ಅದಕ್ಕೆಲ್ಲಾ ನಟಿ ಲಾವಣ್ಯ ಸ್ಪಷ್ಟನೆ ನೀಡಿದ್ದಾರೆ.
ತೆರೆಯ ಮೇಲೆ ವರುಣ್, ಲಾವಣ್ಯ ಜೋಡಿಯ ಕೆಮಿಸ್ಟ್ರಿ ಕಮಾಲ್ ಮಾಡಿದೆ. `ಮಿನಿಸ್ಟರ್’, ಮತ್ತು `ರಾಯಭಾರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ತೆಲುಗಿನ ಹಿರಿಯ ನಟ ನಾಗ ಬಾಬು, ಮಗ ವರುಣ್ ಮದುವೆ ಬಗ್ಗೆ ಸದ್ಯದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿದರು.
ಹಾಗಾಗಿ ವರುಣ್ ತೇಜ್ ಜೊತೆಗಿನ ಲಾವಣ್ಯ ಮದುವೆ ಎಂದು ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವಳು ನಾನಲ್ಲ ಎಂದು ಲಾವಣ್ಯ ಹೇಳಿದ್ದಾರೆ.
ಪ್ರಸ್ತುತ್ತ ನನ್ನ ಜೀವನದಲ್ಲಿ ಸಿನಿಮಾಗಳಲ್ಲಿ ನಟಿಸುವುದೇ ಮುಖ್ಯ. ಸಿನಿಮಾ ಬಿಟ್ಟು ಮದುವೆ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ಹೇಳಿದ್ದು, ಈ ಮೂಲಕ ವರುಣ್ ತೇಜ್ ಜೊತೆಗಿನ ಮದುವೆ ಸುದ್ದಿಗೆ ನಟಿ ಬ್ರೇಕ್ ಹಾಕಿದ್ದಾರೆ.