ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕ್ಯಾನ್ಸರ್ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನ ಕೇಳಿ ಮೆಗಾಸ್ಟಾರ್ ಅಭಿಮಾನಿಗಳು ಕಂಗಾಲಾಗಿದ್ದು ಇದೀಗ ಘಟನೆಯ ಕುರಿತು ಚಿರಂಜೀವಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಾನು ಕ್ಯಾನ್ಸರ್ ಸೆಂಟರ್ ಉದ್ಘಾಟನೆ ವೇಳೆ ಕ್ಯಾನ್ಸರ್ ಜಾಗೃತಿ ಬಗ್ಗೆ ಮಾತನಾಡಿದ್ದೆ. ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಿದರೆ ಕ್ಯಾನ್ಸರ್ ತಡೆಗಟ್ಟಬಹುದು ಅಂತ ಹೇಳಿದ್ದೆ. ನಾನೂ ಕೂಡ ಎಚ್ಚರಿಕೆ ವಹಿಸಿ, ಪರೀಕ್ಷೆ ಮಾಡಿಸಿದ್ದೆ. ನನ್ನಲ್ಲಿ ಕ್ಯಾನ್ಸರಸ್ ಅಲ್ಲದ ಊತ ಕಾಣಿಸಿತ್ತು. ಬಳಿಕ ಅದನ್ನು ತೆಗೆಯಲಾಯಿತು. ಆ ಪರೀಕ್ಷೆ ಮಾಡಿಸಿಕೊಳ್ಳದೇ ಇದ್ದಿದ್ದರೆ ಅದು ಕ್ಯಾನ್ಸರ್ ಆಗಿ ಬದಲಾಗುವ ಸಾಧ್ಯತೆ ಇತ್ತು. ಹಾಗಾಗಿಯೇ ಎಲ್ಲರೂ ಮುಂಜಾಗೃತೆ ವಹಿಸಿ, ಪರೀಕ್ಷೆ ಮಾಡಿಸಿಕೊಳ್ಳಬೇಕು ಅಂತ ಮಾತ್ರ ನಾನು ಹೇಳಿದ್ದೆ ಎಂದು ನಟ ಚಿರಂಜೀವಿ ಟ್ವೀಟ್ ಮಾಡಿದ್ದಾರೆ.
ಕೆಲವರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನನಗೆ ಕ್ಯಾನ್ಸರ್ ಆಗಿದೆ ಮತ್ತು ಚಿಕಿತ್ಸೆಯಿಂದ ಬದುಕಿದೆ ಅಂತ ಸುದ್ದಿ ಮಾಡಿದ್ದಾರೆ. ಇದರಿಂದ ಅನಗತ್ಯವಾಗಿ ಗೊಂದಲ ಶುರುವಾಗಿದೆ. ಅನೇಕ ಹಿತೈಷಿಗಳು ನನಗೆ ಸಂದೇಶ ಕಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಇದು ನನ್ನ ಸ್ಪಷ್ಟನೆ. ವಿಷಯ ಅರ್ಥವಾಗದೇ ಅಸಂಬದ್ಧಗಳನ್ನೆಲ್ಲ ಬರೆಯಬೇಡಿ ಅಂತ ಮಾಧ್ಯಮದವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಇದರಿಂದಾಗಿ ಅನೇಕರಿಗೆ ಭಯ ಮತ್ತು ನೋವು ಆಗುತ್ತದೆ ಎಂದು ಚಿರಂಜೀವಿ ಅವರು ಸ್ಪಷ್ಟನೆ ನೀಡಿದ್ದಾರೆ.