ವಾತಾವರಣ ಚಳಿಯಿಂದ ಕೂಡಿರುವಾಗ ಏನಾದರೂ ಬಿಸಿಯಾದ ಆಹಾರ ಸೇವನೆ ಮಾಡಬೇಕು ಎನಿಸುವುದು ಸಹಜ. ಅದರಲ್ಲೂ ಚಳಿಗಾಲದಲ್ಲಿ ಬಿಸಿ ಕಾಫಿ, ಬಜ್ಜಿ, ಬೋಂಡಾಗಳನ್ನು ತಿನ್ನಲು ಮನಸ್ಸು ಹಾತೊರೆಯುತ್ತದೆ. ಆದರೆ ಅಂತಹ ಆಹಾರಗಳಿಂದ ದೇಹಕ್ಕೆ ಹಾನಿಯಾಗಬಹುದು.
ಹೀಗಾಗಿ ಆರೋಗ್ಯಕ್ಕೂ ಹಿತವಾದ,
ಬಾಯಿಗೂ ರುಚಿಯಾದ ಬಿಸಿ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಅಂತಹ ಆಹಾರಗಳ ಪಟ್ಟಿಗೆ ಹೆಲ್ತಿ ಆಹಾರ ಟೊಮೆಟೋ ಸೂಪ್ ಕೂಡ ಸೇರಿಕೊಳ್ಳುತ್ತದೆ. ಹಾಗಾದರೆ ಚಳಿಗಾಲದಲ್ಲಿ ಟೊಮೆಟೋ ಸೂಪ್ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಅನಾರೋಗ್ಯದಿಂದ ರಕ್ಷಣೆ : ಚಳಿಗಾಲದಲ್ಲಿ ಖಾಯಿಲೆ ಹೆಚ್ಚು. ಬಹುತೇಕರು ಋತುವಿನಲ್ಲಿ ಕಾಣಿಸಿಕೊಳ್ಳುವ ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಾರೆ. ಆಗಾಗ ಖಾಯಿಲೆ ಬೀಳೋದು ಹೆಚ್ಚು. ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕೂಡ ಹದಗೆಡುತ್ತೆ ಎನ್ನುವವರು ಡಯಟ್ ನಲ್ಲಿ ಟೊಮೆಟೊ ಸೂಪ್ ಸೇರಿಸಿ. ಇದ್ರಿಂದ ದೊಡ್ಡ ಮಟ್ಟದ ಪರಿಹಾರ ಸಿಗುತ್ತದೆ. ಟೊಮೊಟೊದಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾ (Bacteria) ವಿರುದ್ಧ ಹೋರಾಡುವ ನಮಗೆ ಶಕ್ತಿ ನೀಡುವ ಜೊತೆಗೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ.
ದೇಹದ ಉಷ್ಣತೆ: ಚಳಿಗಾಲದಲ್ಲಿ ಶೀತದಿಂದಾಗಿ ನಮ್ಮ ದೇಹದ ಉಷ್ಣತೆಯಲ್ಲಿ ಏರುಪೇರಾಗುತ್ತದೆ. ಚಳಿಯಿಂದ ಬಳಲುವವರು ದೇಹವನ್ನು ಬಿಸಿ ಮಾಡಲು ಟೀ, ಕಾಫಿ ಸೇವನೆ ಮಾಡ್ತಾರೆ. ಆದ್ರೆ ಇದು ಕೆಲ ಸಮಯ ಮಾತ್ರ ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಹಾಗೆ ನಿರ್ಜಲೀಕರಣ ಸಮಸ್ಯೆ ಹೆಚ್ಚಿಸುತ್ತದೆ. ಆದ್ರೆ ಟೊಮೊಟೊ ಸೂಪ್ ನಮ್ಮ ದೇಹವನ್ನು ಬೆಚ್ಚಗಿಡುವ ಜೊತೆಗೆ ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ತೂಕ ನಿಯಂತ್ರಣಕ್ಕೆ ಟೊಮೊಟೊ ಸೂಪ್: ಚಳಿಗಾಲದಲ್ಲಿ ಹಸಿವು ಹೆಚ್ಚು. ಇದೇ ಕಾರಣಕ್ಕೆ ಅನೇಕರು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆ ಮಾಡ್ತಾರೆ. ಜೊತೆಗೆ ಚಳಿ ಕಾರಣಕ್ಕೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ತೂಕ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ತೂಕ ನಿಯಂತ್ರಣದಲ್ಲಿರಬೇಕು, ಹೊಟ್ಟೆ ತುಂಬಿದ ಅನುಭವವಾಗ್ಬೇಕು ಎನ್ನುವವರು ಟೊಮೆಟೊ ಸೂಪ್ ಸೇವಿಸಿ. ಅದು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಟೊಮೊಟೊ ಸೂಪ್ ನಲ್ಲಿ ಕಡಿಮೆ ಕ್ಯಾಲೋರಿಯಿದೆ. ಇದ್ರಲ್ಲಿರುವ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ನೀವು ಹೆಚ್ಚು ತಿನ್ನೋದು ನಿಯಂತ್ರಣಕ್ಕೆ ಬರುತ್ತದೆ.
ದೇಹದಿಂದ ಹೊರ ಹೋಗುತ್ತೆ ವಿಷ: ಚಳಿಗಾಲದಲ್ಲಿ ಟೊಮೆಟೊ ಸೂಪ್ ಸೇವನೆ ಮಾಡೋದ್ರಿಂದ ದೇಹದಲ್ಲಿರುವ ವಿಷ ಹೊರ ಹೋಗಲು ನೆರವಾಗುತ್ತದೆ. ಮೊದಲೇ ಹೇಳಿದಂತೆ ಚಳಿಗಾಲದಲ್ಲಿ ತಿನ್ನುವುದು ಹೆಚ್ಚಾಗುತ್ತದೆ. ಅದ್ರಲ್ಲೂ ಬಿಸಿ ಬಿಸಿ ಫಾಸ್ಟ್ ಫುಡ್ ಸೇವನೆ ಹೆಚ್ಚು. ಇದ್ರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುವುತ್ತವೆ. ಅತಿಯಾದ ಸೇವನೆಯಿಂದ ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ.
ಟೊಮೆಟೊ ಸೂಪ್ ಈ ಎರಡೂ ಸಮಸ್ಯೆಗಳಿಗೆ ಉತ್ತಮ ಪರಿಹಾರ ನೀಡುತ್ತದೆ. ಟೊಮೆಟೊ ಸೂಪ್ ನಲ್ಲಿರುವ ನೀರಿನ ಅಂಶ, ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದರಿಂದಾಗಿ ಯುಟಿಐಗೆ ರಕ್ಷಣೆ ಸಿಗುತ್ತದೆ. ಇದಲ್ಲದೆ, ಟೊಮೆಟೊದಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ಹಾಗಾಗಿ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.