ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಆರಂಭವಾಗಿ ಸರಿಯಾಗಿ ಐದು ವರ್ಷ ಆಯಿತು. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನ ಮಧ್ಯಂತರ ಬಜೆಟ್ನಲ್ಲಿ (2019 Interim Budget) ಈ ಸ್ಕೀಮ್ ಚಾಲನೆಗೊಂಡಿತು. ಪ್ರತೀ ವರ್ಷ ಮೂರು ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರಿಗೆ ಸರ್ಕಾರ ಒದಗಿಸುತ್ತದೆ. ಈವರೆಗೆ 15 ಕಂತುಗಳನ್ನು ರೈತರಿಗೆ ನೀಡಲಾಗಿದೆ.
ಪಿಎಂ ಕಿಸಾನ್ ಸ್ಕೀಮ್ನಲ್ಲೂ ಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯ. ಕಳೆದ ಕೆಲ ತಿಂಗಳುಗಳಿಂದಲೂ ಸರ್ಕಾರ ಎಲ್ಲಾ ಫಲಾನುಭವಿಗಳಿಗೂ ಕೆವೈಸಿ ಸಲ್ಲಿಸುವಂತೆ ನಿರ್ದೇಶನ ನೀಡುತ್ತಿದೆ. ಅಂದಾಜು 10 ಕೋಟಿ ಅರ್ಹ ಫಲಾನುಭವಿಗಳ ಪೈಕಿ ಒಂದು ಕೋಟಿಯಷ್ಟು ಮಂದಿ ಕೆವೈಸಿ ಪರಿಷ್ಕರಿಸಿಲ್ಲ ಎನ್ನಲಾಗಿದೆ. ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಳಲ್ಲಿ ಕೆವೈಸಿ ಅಪ್ಡೇಟ್ ಮಾಡಬಹುದು. ಇಕೆವೈಸಿ ಮಾಡದಿದ್ದರೆ 16ನೇ ಕಂತಿನ ಹಣವಾದ 2,000 ರೂ ನಿಮ್ಮ ಖಾತೆಗೆ ಬರುವುದಿಲ್ಲ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಕೆವೈಸಿಗೆ ಜನವರಿ 31ರವರೆಗೆ ಗಡುವು
ಡಿಸೆಂಬರ್ನಿಂದ ಮಾರ್ಚ್ವರೆಗಿನ ನಾಲ್ಕು ತಿಂಗಳ ಅವಧಿಗೆ ನೀಡಲಾಗುವ 2,000 ರೂ ಹಣ ನಿಮ್ಮ ಖಾತೆಗೆ ಸಿಗಬೇಕೆಂದರೆ ಇಕೆವೈಸಿ ಪೂರ್ಣಗೊಂಡಿರಬೇಕು. ಅದನ್ನು ಇನ್ನೂ ಮಾಡದೇ ಇದ್ದವರು ಜನವರಿ 31ರೊಳಗೆ ಪೂರ್ಣಗೊಳಿಸಬೇಕು.
2023ರಲ್ಲಿ ಇದೇ ಅವಧಿಯ ಕಂತಿನ ಹಣ ಮಾರ್ಚ್ 27ರಂದು ಬಿಡುಗಡೆ ಆಗಿತ್ತು. ಆದರೆ, ಈ ವರ್ಷ ಅದೇ ದಿನ ಬಿಡುಗಡೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಫೆಬ್ರುವರಿಯಲ್ಲಿ ಬೇಕಾದರೂ ಹಣ ಬಿಡುಗಡೆ ಆಗಬಹುದು.
ಇಕೆವೈಸಿ ಮಾಡುವ ಮುನ್ನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ
- ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಆದ pmkisan.gov.in/ ಗೆ ಹೋಗಿ.
- ಇಲ್ಲಿ ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ವಿಭಾಗ ಕಾಣುತ್ತೀರಿ.
- ಇಲ್ಲಿ ಬೆನಿಫಿಶಿಯರಿ ಲಿಸ್ಟ್ ಎಂಬ ಟ್ಯಾಬ್ ಕ್ಲಿಕ್ ಮಾಡಿ.
- ಇದರಲ್ಲಿ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಂಡು, ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ
- ಈ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ.
-
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಇಕೆವೈಸಿ ಮಾಡುವುದು ಹೇಗೆ?
- ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ: pmkisan.gov.in
- ಫಾರ್ಮರ್ಸ್ ಕಾರ್ನರ್ ವಿಭಾಗದಲ್ಲಿ ಇಕೆವೈಸಿ ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ
- ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಆಗಿ ಖಚಿತಪಡಿಸಿ
- ಸರ್ಚ್ ಆಯ್ಕೆ ಕ್ಲಿಕ್ ಮಾಡಿ
- ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಿ ಒಟಿಪಿ ಪಡೆದು ನಮೂದಿಸಿ.
- ಇಲ್ಲಿಗೆ ಇಕೆವೈಸಿ ಪ್ರಕ್ರಿಯೆ ಮುಗಿಯುತ್ತದೆ.