ದೆಹಲಿ: ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್ಸ್ ವೆಸ್ಟ್ ಇಂಡೀಸ್ ಎದುರು ಪ್ರವಾಸಿ ಟೀಮ್ ಇಂಡಿಯಾ ಬರೋಬ್ಬರಿ 5 ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯನ್ನು ಆಡಲಿದೆ. ಈ ಸಲುವಾಗಿ ಅಜಿತ್ ಅಗರ್ಕರ್ ಸಾರಥ್ಯದ ಭಾರತ ತಂಡದ ಆಯ್ಕೆ ಸಮಿತಿಯು ಜುಲೈ 5ರಂದು (ಬುಧವಾರ) ಹಾರ್ದಿಕ್ ಪಾಂಡ್ಯ ಸಾರಥ್ಯದ 15 ಆಟಗಾರರ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ.
ನಿರೀಕ್ಷೆಯಂತೆ ಆಯ್ಕೆ ಸಮಿತಿ ಕೆಲ ಯುವ ಆಟಗಾರರಿಗೆ ಮಣೆ ಹಾಕಿದೆ. ಆದರೆ, ಐಪಿಎಲ್ 2023 ಟೂರ್ನಿಯಲ್ಲಿ ಅಬ್ಬರಿಸಿ ಭಾರತ ಟಿ20 ತಂಡದ ಕದ ಬಡಿಯುತ್ತಿದ್ದ ಕೆಲ ಆಟಗಾರರಿಗೆ ಅದೃಷ್ಟ ಒಲಿಯಲಿಲ್ಲ ಅಂತಹ ಕೆಲ ಪ್ರಮುಖ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ರಿಂಕು ಸಿಂಗ್ ಆಡಿದ 14 ಇನಿಂಗ್ಸ್ಗಳಲ್ಲಿ 474 ರನ್ಗಳನ್ನು ಬಾರಿಸಿದ್ದರು. ಅಲಿಗಡ ಮೂಲದ 25 ವರ್ಷದ ಎಡಗೈ ಬ್ಯಾಟರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದರು. ಅಷ್ಟೇ ಅಲ್ಲದೆ ಫಿನಿಷರ್ ಕೆಲಸ ನಿಭಾಯಿಸುವಲ್ಲಿ ನಿಸ್ಸೀಮರಾಗಿದ್ದರು
ಓಪನರ್ ಋತುರಾಜ್ ಗಾಯಕ್ವಾಡ್
ಇಂಡಿಯನ್ ಪ್ರೀಮಿಯರ್ ಲೀಗ್ ಅಖಾಡದಲ್ಲಿ ಉದಯಿಸಿದ ಪ್ರತಿಭೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಕೂಡ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಓಪನರ್ ಆಗಿ ಸೈ ಎನಿಸಿಕೊಂಡಿರುವ ಋತುರಾಜ್ ಗಾಯಕ್ವಾಡ್, ಐಪಿಎಲ್ 2023 ಟೂರ್ನಿಯಲ್ಲಿ ಆಡಿದ 16 ಇನಿಂಗ್ಸ್ಗಳಲ್ಲಿ 590 ರನ್ ಬಾರಿಸಿದ್ದರು.
ಕೀಪರ್ ಜಿತೇಶ್ ಶರ್ಮಾ
ಪಂಜಾಬ್ ಕಿಂಗ್ಸ್ ತಂಡದ ಪರ ಆಡಿದ್ದ ಯುವ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಜಿತೇಶ್ ಶರ್ಮಾ ಅವರಿಗೂ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಕ್ಕಿಲ್ಲ
ವೇಗಿ ಮೋಹಿತ್ ಶರ್ಮಾ
ಐಪಿಎಲ್ 2014 ಟೂರ್ನಿಯಲ್ಲಿ ಪರ್ಪಲ್ ಕ್ಯಾಪ್ ಗೆದ್ದು, 2014ರ ಟಿ20 ವಿಶ್ವಕಪ್ ಮತ್ತು 2015ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಅನುಭವಿ ವೇಗದ ಬೌಲರ್ ಮೋಹಿತ್ ಶರ್ಮಾ, ಬಳಿಕ ಗಾಯದ ಸಮಸ್ಯೆಗಳು ಮತ್ತು ಅಸ್ಥಿರ ಪ್ರದರ್ಶನ ಕಾರಣ ಮೂಲೆಗುಂಪಾಗಿದ್ದರು.
ಆಲ್ರೌಂಡರ್ ಶಿವಂ ದುಬೇ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಐಪಿಎಲ್ 2023 ಟೂರ್ನಿಯಲ್ಲಿ ದೈತ್ಯ ಹೊಡೆತಗಳ ಮೂಲಕ ಅಬ್ಬರಿಸಿದ ಯುವ ಆಲ್ರೌಂಡರ್ ಶಿವಂ ದುಬೇ ಅವರಿಗೂ ಸ್ಥಾನ ಸಿಕ್ಕಿಲ್ಲ.