ಬೀಜಿಂಗ್: ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಧಾರಾಕಾರಕ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಕಂಗಾಲಾಗಿದ್ದು ಸದ್ಯ 15 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ಇದುವರೆಗೂ ನಾಲ್ವರು ನಾಪತ್ತೆಯಾಗಿದ್ದು ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಸೋಮವಾರ ಬೆಳಗ್ಗೆ 7 ಗಂಟೆಯಿಂದ ನೈರುತ್ಯ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ 15 ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಈ ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping), ಎಲ್ಲಾ ಹಂತಗಳ ಅಧಿಕಾರಿಗಳು ಜನರ ಸುರಕ್ಷತೆ ಮತ್ತು ಆಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಪ್ರಮುಖ ಅಧಿಕಾರಿಗಳು ಪ್ರವಾಹದ ವಿರುದ್ಧ ಹೋರಾಡುವಲ್ಲಿ ಮುಂದಾಳತ್ವ ವಹಿಸಬೇಕು. ನಷ್ಟಗಳನ್ನು ಕಡಿಮೆಗೊಳಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದ್ದಾರೆ. ನೆರೆಯ ಸಿಚುವಾನ್ನಲ್ಲಿ ಈ ತಿಂಗಳು ಭಾರೀ ಮಳೆಯಿಂದ 4,60,000ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಭೀಕರ ಮಳೆಯ ಪರಿಣಾಮ ಸುಮಾರು 85,000 ಜನರನ್ನು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಈ ವಾರ ಮಳೆಯಿಂದಾಗಿ ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.