ಕೊಪ್ಪಳ: ಮಲೆನಾಡಿನಲ್ಲಿ ವರುಣಾರ್ರಭಟ ಜೋರಾದ ಹಿನ್ನೆಲೆಯಲ್ಲಿ ಬರದನಾಡಿನ ಜೀವನಾಡಿಯಾಗಿರುವ ತುಂಗಾಭದ್ರ ಜಲಾಶಯ ಮೈದುಂಬಿದ್ದು ಡ್ಯಾಂ ಭರ್ತಿಗೆ ಇನ್ನೇನು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ.
ಬರಿದಾಗಿದ್ದ ತುಂಗಾಭದ್ರ ಜಲಾಶಯ ಕೇವಲ ಮೂರೇ ವಾರಕ್ಕೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದುಬಂದಿದೆ. ಮಲೆನಾಡಿನ ಹಲವೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾಭದ್ರ ಜಲಾಶಯಗೆ ಜೀವ ಕಳೆ ಬಂದಿದೆ. ಇದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದ್ದು ತುಂಬಿದ ಜಲಾಶಯವನ್ನು ನೋಡಲು ಸಾಖಷ್ಟು ಪ್ರವಾಸಿಗರು ಬರುತ್ತಿದ್ದಾರೆ.
ತುಂಗಾಭದ್ರ ಜಲಾಶಯದ ಭರ್ತಿಗೆ ಇನ್ನೇನು ಕೇವಲ 8 ಅಡಿಗಳು ಮಾತ್ರ ಬಾಕಿ ಉಳಿದಿದೆ. 1,633 ಅಡಿ ಸಾಮರ್ಥ್ಯದ ಈ ಜಲಾಶಯ ಈಗಾಗಲೇ 1,625 ಅಡಿಯಷ್ಟು ತುಂಬಿದೆ. ಒಟ್ಟು 105 ಟಿಎಂಸಿ ಸಾಮರ್ಥ್ಯ ಇರುವ ಇದರಲ್ಲಿ 75 ಟಿಎಂಸಿ ನೀರು ಸಂಗ್ರಹವಾಗಿರುವುದು ಖುಷಿ ತಂದಿದೆ.
ತುಂಗಾಭದ್ರ ಜಲಾಶಯದಲ್ಲಿ ಒಳಹರಿವು ಹೆಚ್ಚಳ ಭಾರೀ ಏರಿಕೆಯಾಗಿದೆ. ಮಾಹಿತಿ ಪ್ರಕಾರ 1,30,000 ಕ್ಯೂಸೆಕ್ ಜಲಾಶಯಕ್ಕೆ ನೀರು ಹರಿದು ಬಂದಿದೆ. ತುಂಗಾಭದ್ರ ಜಲಾಶಯವು ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ಹೊಸಪೇಟೆ ಜಿಲ್ಲೆಗಳು ಹಾಗೂ ಆಂಧ್ರ, ತೆಲಂಗಾಣ ರೈತರ ಜೀವನಾಡಿಯಾಗಿದೆ. ಈ ಡ್ಯಾಂ ತುಂಬುತ್ತಿದ್ದಂತೆ ಎಡದಂಡೆ ಕಾಲುವೆ ರೈತರಲ್ಲಿ ಮಂದಹಾಸ ಮೂಡಿದೆ.