ಲಾಹೋರ್ನಲ್ಲಿರುವ ಇಮ್ರಾನ್ ಖಾನ್ ಅವರ ಮನೆಯ ಕಾಂಪೌಂಡ್ಗೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ತೋಶಖಾನಾ ಪ್ರಕರಣದಲ್ಲಿ ಇಮ್ರಾನ್ ಬಂಧನವನ್ನು ತಡೆಯಲು ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನಿವಾಸದ ಹೊರಗೆ ಜಮಾಯಿಸಿದ ಬೆಂಬಲಿಗರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ.
ಪಾಕಿಸ್ತಾನದ ಪೊಲೀಸರು ಮತ್ತು ಇಮ್ರಾನ್ ಖಾನ್ ಅವರ ಬೆಂಬಲಿಗರು ಮಂಗಳವಾರ ಲಾಹೋರ್ನ ಪೂರ್ವ ನಗರದಲ್ಲಿರುವ ಮಾಜಿ ಪ್ರಧಾನಿ ಮನೆಯ ಹೊರಗೆ ಮುಖಮುಖಿಯಾಗಿದ್ದು ಅವರ ಸಂಭವನೀಯ ಬಂಧನಕ್ಕೆ ಮುಂಚಿತವಾಗಿ ಹಲವರು ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.
ಪೊಲೀಸರು ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಶೆಲ್ ಗಳನ್ನು ಪ್ರಯೋಗಿಸಿದರು. ಮಂಗಳವಾರ ಸಂಜೆ ಖಾನ್ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದು ತಾನು ಜೈಲಿಗೆ ಹೋದರೂ ಸಹ ಪ್ರಧಾನಿ ಶೆಹಬಾಜ್ ಷರೀಫ್ ಅವರ ಆಡಳಿತ ಪಕ್ಷಕ್ಕೆ ಸವಾಲು ಹಾಕುವುದನ್ನು ಮುಂದುವರಿಸಲು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ನನ್ನನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ಇಮ್ರಾನ್ ಖಾನ್ ಜೈಲಿಗೆ ಹೋದರೆ ಜನ ನಿದ್ದೆ ಹೋಗುತ್ತಾರೆ ಎಂದು ಭಾವಿಸುತ್ತಾರೆ. ನೀವು ಅವರನ್ನು ತಪ್ಪು ಎಂದು ಸಾಬೀತುಪಡಿಸಬೇಕು, ಜನರು ಜೀವಂತವಾಗಿದ್ದಾರೆ ಎಂದು ನೀವು ಸಾಬೀತುಪಡಿಸಬೇಕು ಎಂದಿದ್ದಾರೆ ಖಾನ್. ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕಾರ್ಯಕರ್ತರು ಹಿಂಸಾಚಾರವನ್ನು ಪ್ರಾರಂಭಿಸಿದ್ದು ಇದರಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳಿಗೆ ಗಾಯವಾಗಿದೆ ಎಂದು ಸರ್ಕಾರದ ವಕ್ತಾರ ಅಮೀರ್ ಮಿರ್ ರಾಯಿಟರ್ಸ್ಗೆ ತಿಳಿಸಿದ್ದಾರೆ. “ಇಮ್ರಾನ್ ಖಾನ್ ನ್ಯಾಯಾಲಯದಲ್ಲಿ ತನ್ನ ಉಪಸ್ಥಿತಿಯನ್ನು ಖಾತ್ರಿಪಡಿಸಿದರೆ ಒಳ್ಳೆಯದು, ಇಲ್ಲದಿದ್ದರೆ ಕಾನೂನು ಅದರ ರೀತಿಯಲ್ಲಿ ಮುಂದುವರಿಯುತ್ತದೆ ಎಂದಿದ್ದಾರೆ.