ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಬಿಡದಿಯಲ್ಲಿ 3,300 ಕೋಟಿ ರೂ. ವೆಚ್ಚದಲ್ಲಿ ತನ್ನ ಮೂರನೇ ಕಾರು ಉತ್ಪಾದನಾ ಘಟಕವನ್ನು ಆರಂಭಿಸಲು ಸರಕಾರ ಮತ್ತು ಕಂಪನಿ ನಡುವೆ ಇಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಸರ್ಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಮತ್ತು ಟೊಯೋಟಾ ಪರವಾಗಿ ಕಂಪನಿಯ ಉಪಾಧ್ಯಕ್ಷ ಸುದೀಪ್ ದಳವಿ ಅಂಕಿತ ಹಾಕಿ, ಒಡಂಬಡಿಕೆ ಪತ್ರವನ್ನು ವಿನಿಮಯ ಮಾಡಿಕೊಂಡರು.
ಸರ್ಕಾರವು ಕೈಗಾರಿಕಾ ರಂಗದ ಬೆಳವಣಿಗೆಗೆ ಆದ್ಯ ಗಮನ ಕೊಟ್ಟಿದ್ದು, ವಿದ್ಯುತ್ ಚಾಲಿತ ವಾಹನಗಳ ವಲಯ ಸೇರಿದಂತೆ ಒಟ್ಟು 9 ವಲಯಗಳಿಗೆ ಅನ್ವಯವಾಗುವಂತೆ ವಿಷನ್ ಗ್ರೂಪ್ಗಳನ್ನು ರಚಿಸಿದೆ. ಇವುಗಳಲ್ಲಿ ಗಣ್ಯ ಉದ್ಯಮಿಗಳೇ ಇದ್ದು, ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಲಾಗುವುದು. ಜತೆಗೆ ಕರ್ನಾಟಕ ಇನ್ವೆಸ್ಟ್ಮೆಂಟ್ ಫೋರಂ ಮತ್ತು ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ ಫೋರಂ ಎರಡಕ್ಕೂ ಹೊಸ ರೂಪ ನೀಡಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಟೊಯೋಟಾ ವ್ಯವಸ್ಥಾಪಕ ನಿರ್ದೇಶಕ ಮಸಕಝು ಯೋಶಿಮುರ, ಉಪಾಧ್ಯಕ್ಷರಾದ ಸ್ವಪ್ನೇಶ್ ಮರು, ವಿಕ್ರಂ ಗುಲಾಟಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.