ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಯಾನಂದ ಅವರು, ಪೊಲೀಸ್ ಇಲಾಖೆ ಮೇಲೆ ಜನರಿಗೆ ನಂಬಿಕೆ ಇದೆ, ಆ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸುತ್ತೇನೆ.
ಪೊಲೀಸ್ ಆಯುಕ್ತರಾಗಿ ಬೆಂಗಳೂರಿಗೆ ಸಂಬಂಧಪಟ್ಟಂತೆ ಹಲವು ಸವಾಲುಗಳಿದ್ದು, ಅವುಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು. ನಗರದಲ್ಲಿ ಸಂಚಾರ ನಿರ್ವಹಣೆಗೆ ನಾಗರಿಕ ಸಂಸ್ಥೆಗಳಿಂದ ಸಮನ್ವಯತೆ ಅಗತ್ಯ. ಸಂಚಾರ ದಟ್ಟಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಇಲಾಖೆಯು ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತದೆ ಎಂದರು.
ಟೋಯಿಂಗ್ ವ್ಯವಸ್ಥೆಯನ್ನು ಹಿಂಪಡೆಯುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಇಲಾಖೆಯು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ. ಇನ್ನೂ ನಿರ್ಗಮಿತ ಕಮಿಷನರ್ ಸಿ.ಎಚ್. ಪ್ರತಾಪ್ ರೆಡ್ಡಿ ಅವರು ಅಧಿಕೃತವಾಗಿ ಲಾಠಿ ಹಸ್ತಾಂತರಿಸಿದರು.
ಅಧಿಕಾರ ಸ್ವೀಕರಿಸಿದ ಬಿ. ದಯಾನಂದ ಅವರು ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆ ಮತ್ತು ಸೈಬರ್ ಕ್ರೈಮ್ ಮೇಲೆ ಆದ್ಯತೆಯಿಂದ ಗಮನ ಹರಿಸುವುದಾಗಿ ಹೇಳಿದ್ದಾರೆ.