ಲಕ್ನೋ: ಫ್ಯಾಷನ್ ರನ್ವೇನಲ್ಲಿ ರ್ಯಾಂಪ್ವಾಕ್ (Ramp Walk) ಮಾಡುತ್ತಿದ್ದ ವೇಳೆ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಮಾಡೆಲ್ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ. ಮೃತ ಮಾಡೆಲ್ ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 16ಎ ನಲ್ಲಿರುವ ಫಿಲ್ಮ್ ಸಿಟಿಯ (Noida Film City) ಲಕ್ಷ್ಮೀ ಸ್ಟುಡಿಯೋನಲ್ಲಿ ಅಪಘಾತ ಸಂಭವಿಸಿದೆ. ಲೈಟಿಂಗ್ ವ್ಯವಸ್ಥೆಗಾಗಿ ಕಬ್ಬಿಣದ ಪಿಲ್ಲರ್ ನಿರ್ಮಿಸಲಾಗಿತ್ತು. ಅದು ವೇದಿಕೆ ಮೇಲೆ ಬಿದ್ದು ಮಾಡೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಬಾಬಿ ರಾಜ್ ಎಂಬ ವ್ಯಕ್ತಿ ಸಹ ಗಾಯಗೊಂಡಿದ್ದು,
ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಷನ್ ಶೋ (Fashion Show) ಆಯೋಜಕರು ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ ನಾಲ್ವರನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಶಿಕಾ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ, ಫ್ಯಾಷನ್ ಶೋಗೆ ಅನುಮತಿ ನೀಡಿಲ್ಲ ಎಂಬುದಾಗಿಯೂ ತಿಳಿಸಿದ್ದಾರೆ.