ನವದೆಹಲಿ: ಬೆಂಗಳೂರಿನಿಂದ ಅಯೋಧ್ಯೆಗೆ ತೆರಳುವ ಮಂದಿಗೆ ಸಿಹಿ ಸುದ್ದಿ. ಬೆಂಗಳೂರಿನಿಂದ ಅಯೋಧ್ಯೆ ನೇರ ವಿಮಾನ ಸೇವೆ ನೀಡುವುದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಕಟಿಸಿದೆ.
ದೇಶದ ಮೂರು ಮಹಾನಗರಗಳಿಂದ ಅಯೋಧ್ಯೆಯಲ್ಲಿರುವ ಮಹರ್ಷಿ ವಾಲ್ಮಿಕಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ವಿಮಾನ ಸಂಪರ್ಕ ಕಲ್ಪಿಸುವುದಾಗಿ ಏರ್ ಇಂಡಿಯಾ ಹೇಳಿದೆ.
ಮೊದಲ ವಿಮಾನ ಜ.17 ರಿಂದ ಬೆಂಗಳೂರು- ಅಯೋಧ್ಯೆ, ಕೋಲ್ಕತ್ತಾ – ಅಯೋಧ್ಯೆ ಮಧ್ಯೆ ಹಾರಾಟ ನಡೆಸಲಿದೆ. ಬೆಂಗಳೂರಿನಿಂದ ಬೆಳಗ್ಗೆ 8:05ಕ್ಕೆ ಟೇಕಾಫ್ ಆದರೆ ಅಯೋಧ್ಯೆಯಲ್ಲಿ ಬೆಳಗ್ಗೆ 10:35ಕ್ಕೆ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 03:40ಕ್ಕೆ ಅಯೋಧ್ಯೆಯಿಂದ ಟೇಕಾಫ್ ಆಗುವ ವಿಮಾನ ಸಂಜೆ 06:10ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ.
ಅಯೋಧ್ಯೆಯಿಂದ ಬೆಳಗ್ಗೆ 11:05ಕ್ಕೆ ಟೇಕಾಫ್ ಆಗುವ ವಿಮಾನ ಮಧ್ಯಾಹ್ನ 12:50ಕ್ಕೆ ಕೋಲ್ಕತ್ತಾದಲ್ಲಿ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 01:25ಕ್ಕೆ ಟೇಕಾಫ್ ಆಗುವ ವಿಮಾನ ಮಧ್ಯಾಹ್ನ 03:10ಕ್ಕೆ ಅಯೋಧ್ಯೆ ತಲುಪಲಿದೆ.
ನಮ್ಮ ನೆಟ್ವರ್ಕ್ನ ಪ್ರಮುಖ ಕೇಂದ್ರಗಳಾಗಿರುವ ಬೆಂಗಳೂರು ಮತ್ತು ಕೋಲ್ಕತ್ತಾಗಳು ಅಯೋಧ್ಯೆಗೆ ಗೇಟ್ವೇಗಳಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಏರ್ಇಂಡಿಯಾ ತಿಳಿಸಿದೆ.