ಬೆಂಗಳೂರು: ಕರ್ನಾಟಕ ಸರ್ಕಾರವು ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿತು. ಈ ಯೋಜನೆಯ ಅಡಿ ಮಹಿಳೆಯರು ರಾಜ್ಯ ಸಾರಿಗೆಯ ನಾಲ್ಕು ನಿಗಮದ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇದರಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡಲು ಈ ವರ್ಷ 1,894 ಹೊಸ ಬಸ್ಗಳನ್ನು ಖರೀದಿಸಲು ಸಾರಿಗೆ ನಿಗಮ ಯೋಚಿಸಿವೆ. ಶಕ್ತಿ ಯೋಜನೆ ಅನುಷ್ಠಾನದ ನಂತರ, ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಬಸ್ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೇ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸಾರಿಗೆ ನಿಮಗ ಮುಂದಾಗಿದೆ.
ಹೆಚ್ಚಿನ ಬಸ್ಗಳ ಅಗತ್ಯವಿರುವ ಕೆಲವು ಮಾರ್ಗಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ, ಬೇಡಿಕೆಯನ್ನು ಪೂರೈಸಲು ವೇಳಾಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ ಮತ್ತು ವೇಳಾಪಟ್ಟಿಗಳನ್ನು ತರ್ಕಬದ್ಧಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ನಾಲ್ಕು ನಿಗಮಗಳು 1,04,450 ಸಿಬ್ಬಂದಿ ಹೊಂದಿವೆ. ಮತ್ತು ಪ್ರಸ್ತುತ, ನಾಲ್ಕು ನಿಗಮಗಳು ರಾಜ್ಯದಾದ್ಯಂತ 23,989 ಬಸ್ಗಳನ್ನು ಹೊಂದಿದ್ದು, ಒಂದು ದಿನಕ್ಕೆ ಸರಾಸರಿ 65.02 ಲಕ್ಷ ಕಿಲೋಮೀಟರ್ ಸಂಚರಿಸುತ್ತವೆ.
ಶೂನ್ಯ ಟಿಕೆಟ್ ಅಥವಾ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಿದ ಡೇಟಾದ ಆಧಾರದ ಮೇಲೆ ನಿಗಮಗಳಿಗೆ ಉಚಿತ ಪ್ರಯಾಣದ ವೆಚ್ಚವನ್ನು ಸರ್ಕಾರ ನೀಡುತ್ತದೆ. ವಿಶೇಷ ಅನುದಾನ ಮತ್ತು ಹಣಕಾಸಿನ ನೆರವಿನ ಹೊರತಾಗಿ ಬಸ್ ಪಾಸ್ಗಳಿಗೆ ಒದಗಿಸಲಾದ ಸಬ್ಸಿಡಿಯನ್ನು ಸರ್ಕಾರವು ವಾಡಿಕೆಯಂತೆ ಮರುಪಾವತಿ ಮಾಡುತ್ತದೆ.
ಸರ್ಕಾರವು ಏಪ್ರಿಲ್ 2022 ರಿಂದ ಮಾರ್ಚ್ 2023 ರವರೆಗೆ ನಾಲ್ಕು ನಿಗಮಗಳಿಗೆ 3,606.52 ಕೋಟಿ ರೂ. ಮರುಪಾವತಿ ಮಾಡಿದೆ. ಶಕ್ತಿ ಯೋಜನೆಗೆ ವಾರ್ಷಿಕ ಸುಮಾರು 4,051. 56 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಲೆಕ್ಕ ಹಾಕಲಾಗಿದೆ.