ಗುವಾಹಟಿ: ಡೀಸೆಲ್ ಟ್ಯಾಂಕ್ನಲ್ಲಿಟ್ಟು ಡ್ರಗ್ಸ್ಗೆ ಸಂಬಂಧಿಸಿದ ಮಾತ್ರೆ ಸಾಗಿಸುತ್ತಿದ್ದ ಕರಾಳ ದಂಧೆಕೋರರನ್ನು ಅಸ್ಸಾಂನ ಕರೀಗಂಜ್ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಇಬ್ಬರು ದಂಧೆಕೋರರನ್ನು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ 1 ಲಕ್ಷ ಮಾತ್ರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ನಜ್ಮುಲ್ ಹುಸೇನ್ ಮತ್ತು ಮುತ್ಲಿಬ್ ಅಲಿ ಎಂದು ಗುರುತಿಸಲಾಗಿದೆ.
ಕರೀಂಗಂಜ್ ಎಸ್ಪಿ ಪಾರ್ಥ ಪ್ರೋತಿಮ್ ದಾಸ್ ಪ್ರಕಾರ, ಕರೀಂಗಂಜ್ ಜಿಲ್ಲೆಯ ರತಾಬರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಧರಾಜ್ ಬರಿ ಪ್ರದೇಶದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ಸಂದರ್ಭದಲ್ಲಿ ದಂಧೆಕೋರರು ಸಿಕ್ಕಿಬಿದ್ದಿದ್ದು, ಅವರಿಂದ ಡ್ರಗ್ಸ್ ರೂಪದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಖತರ್ನಾಕ್ಗಳುಸಿಕ್ಕಿಬಿದ್ದಿದ್ದೇರೋಚಕ:
ಮಿಜೋರಂ ಕಡೆಯಿಂದ ಯಾಬಾ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ತಕ್ಷಣ ರಟಾಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಮೊದಲು ಇಡೀ ವಾಹನ ಜಾಲಾಡಿದರೂ ಏನೂ ಸಿಕ್ಕಿರಲಿಲ್ಲ. ಕೊನೆಗೆ ಡೀಸೆಲ್ ಟ್ಯಾಂಕ್ ಪರಿಶೀಲಿಸಿದಾಗ ಯಾಬಾ ಮಾತ್ರೆಗಳುಳ್ಳ 10 ಪ್ಯಾಕೆಟ್ ಪತ್ತೆಯಾಯಿತು.
ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ ಸುಮಾರು 30 ಕೋಟಿ ರೂ. ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೂ ಮುನ್ನ ಕಳೆದ ಜೂ.7ರಂದು ಅಸ್ಸಾಂ ಪೊಲೀಸರು 8.5 ಕೋಟಿ ರೂ. ಮೌಲ್ಯದ 1.7 ಕಿಲೋಗ್ರಾಮ್ ಹೆರಾಯಿನ್ ವಶಪಡಿಸಿಕೊಂಡಿದ್ದರು.