ಕನ್ನಡದ ಖ್ಯಾತ ನಟಿ ಹಾಗೂ ನಿರೂಪಕಿ ಅಪರ್ಣಾ ನಿಧನರಾಗಿದ್ದಾರೆ. ನಿರೂಪಕಿ ಅಪರ್ಣಾ ಅವರು ನಮ್ಮ ಮೆಟ್ರೋಗೆ ಧ್ವನಿಯಾಗಿದ್ದರು. ಮೆಟ್ರೋ ನಿಲ್ದಾಣ ಮತ್ತು ರೈಲುಗಳಲ್ಲಿ ಕೇಳಿ ಬರುವ ಧ್ವನಿ ಅಪರ್ಣಾ ಅವರದ್ದು. ಮುಂದಿನ ನಿಲ್ದಾಣ ನಾಡಪ್ರಭು ಕೆಂಪೇಗೌಡ ನಿಲ್ದಾಣ.., ಬಾಗಿಲುಗಳು ಎಡಕ್ಕೆ ತೆರೆಯಲಿವೆ ಎಂಬ ಧ್ವನಿ ಅಪರ್ಣ ಅವರದ್ದು. ಇದೀಗ ನಿರೂಪಕಿ ಅಪರ್ಣಾ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ವಾಯ್ಸ್ ಅನೌನ್ಸ್ ಮಾಡವ ಮೂಲಕ ಗೌರವದ ಸಂತಾಪ ಸೂಚಿಸಿದ್ದಾರೆ.
ನಿರೂಪಕಿ ಅಪರ್ಣಾ ಅವರು ಕಳೆದ 13 ವರ್ಷಗಳಿಂದ ನಮ್ಮ ಮೆಟ್ರೋಗೆ ಧ್ವನಿ ನೀಡಿದ್ದಾರೆ. ಮೊದಲ ಬಾರಿಗೆ 2011ರ ಅಕ್ಟೋಬರ್ 20 ರಂದು ಎಂಜಿ ರೋಡ್ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಆರಂಭಿಸಿದಾಗಿನಿಂದ ಇತ್ತೀಚೆಗೆ 2023ರ ಅಕ್ಟೋಬರ್ 9 ರಂದು ಉದ್ಘಾಟನೆಗೊಂಡ ಕೆಂಗೇರಿಯಿಂದ ಚಲ್ಲಘಟ್ಟ, ಕೆ.ಆರ್ ಪುರನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ನಟಿ ಅಪರ್ಣಾ ವಾಯ್ಸ್ ನೀಡಿದ್ದರು.
ತಮ್ಮ ಧ್ವನಿ ನಿಲ್ದಾಣಗಳಲ್ಲಿ ಮತ್ತು ಮೆಟ್ರೋಗಳಲ್ಲಿ ಹೇಗೆ ಕೇಳಿಸುತ್ತದೆ ಎಂದು ತಿಳಿಯಲು ಅಪರ್ಣಾ ಅವರು 2011ರ ದೀಪಾವಳಿಯಂದು ಎಂಜಿ ರೋಡ್ನಿಂದ ಬೈಯ್ಯಪ್ಪನಹಳ್ಳಿವರಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದರು.ಕಳೆದ 13 ವರ್ಷಗಳಿಂದ ಮೆಟ್ರೋ ನಿಲ್ದಾಣ ಮತ್ತು ರೈಲಿಗೆ ಅಪರ್ಣಾ ಧ್ವನಿ ನೀಡುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳು ಅಪರ್ಣಾ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ಎಲ್ಲ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಅಪರ್ಣಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಸೂಚಿಸಿದ್ದಾರೆ.