ತನ್ನ ವಿರುದ್ಧದ ಚುನಾವಣಾ ತಕರಾರು ಅರ್ಜಿಯನ್ನು ವಜಾ ಮಾಡುವಂತೆ ಶಾಸಕ ಎನ್.ಎ ಹ್ಯಾರಿಸ್ (N.A Harris) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಚುನಾವಣೆ ವೇಳೆ ತಪ್ಪು ಪ್ರಮಾಣ ಪತ್ರ ಸಲ್ಲಿಕೆ ಹಿನ್ನಲೆ ಪರಾಜಿತ ಬಿಜೆಪಿ (BJP) ಅಭ್ಯರ್ಥಿ ಶಿವಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪತ್ನಿಯ ಹೆಸರಲ್ಲಿದ್ದ ಆಸ್ತಿಗಳನ್ನ ಹ್ಯಾರಿಸ್ ಘೋಷಿಸಿಲ್ಲ. ಅಲ್ಲದೇ ತಮ್ಮ ಹೆಸರಲ್ಲಿರುವ ಆಸ್ತಿಗಳ ಕಡಿಮೆ ಮೌಲ್ಯಮಾಪನ ಮಾಹಿತಿ ಸಲ್ಲಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ನಡೆಸುತ್ತಿದೆ
ಅಸಮರ್ಪಕ ನಾಮಪತ್ರದಿಂದ ಪ್ರತಿಸ್ಪರ್ಧಿಗೆ ಹೇಗೆ ತೊಂದರೆ ಆಗಿದೆ ಎಂದು ವಿವರಿಸಿಲ್ಲ. ಪ್ರತಿಸ್ಪರ್ಧಿ ಸೋಲಿಗೆ ಹೇಗೆ ಕಾರಣವಾಯಿತು ಎಂಬ ನಿಖರ ಅಂಶವನ್ನು ಅರ್ಜಿದಾರರು ಅರ್ಜಿಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಜಾ ಮಾಡುವಂತೆ ಹ್ಯಾರಿಸ್ ಕೋರ್ಟ್ಗೆ ಮನವಿ ಮಾಡಿದ್ದರು. ಈಗ ಹ್ಯಾರೀಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾ.ಸೂರಜ್ ಗೋವಿಂದ್ ರಾಜ್ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ. ಅಲ್ಲದೇ ಪರಾಜಿತ ಅಭ್ಯರ್ಥಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣಾ ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟ ಕೋರ್ಟ್ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದೆ.