ನಾಜಿ ಸಿದ್ದಾಂತದಿಂದ ಪ್ರೇರೆಪಣೆಗೊಂಡು ಕಳೆದ ವರ್ಷ ಬಾಡಿಗೆ ಟ್ರಕ್ನಿಂದ ಶ್ವೇತಭವನದ ಮೇಲೆ ದಾಳಿ ನಡೆಸಿದ್ದೆ ಎಂದು ಅಮೆರಿಕದಲ್ಲಿ ಖಾಯಂ ಆಗಿ ನೆಲೆಸಿರುವ 20 ವರ್ಷದ ಭಾರತೀಯ ಪ್ರಜೆಯೊಬ್ಬ ತಪ್ಪೊಪ್ಪಿಕೊಂಡಿದ್ದಾರೆ.
ತಪ್ಪೊಪ್ಪಿಕೊಂಡಿರುವ ಭಾರತೀಯ ಮೂಲದ ಆರೋಪಿಯನ್ನು ಸಾಯಿ ವರ್ಷಿತ್ ಕಂದುಲಾ ಎಂದು ಗುರುತಿಸಲಾಗಿದೆ. ಈತ ಮಿಸೌರಿಯ ಸೇಂಟ್ ಲೂಯಿಸ್ನಲ್ಲಿ ವಾಸಿಸುತ್ತಿದ್ದು ಕಳೆದ ವರ್ಷ ಮೇ.22ರಂದು ಬಾಡಿಗೆ ಟ್ರಕ್ನಿಂದ ಶ್ವೇತಭವನಕ್ಕೆ ಡಿಕ್ಕಿ ಹೊಡೆಸಿದ್ದ ಎಂದು ವರದಿಯಾಗಿದೆ.
ಅಮೆರಿಕ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಡಾಬ್ನಿ ಔ. ಫ್ರೆಡ್ರಿಕ್ ಅವರು ಸಾಯಿ ವರ್ಷಿತ್ ಶಿಕ್ಷೆಯನ್ನು ಆಗಸ್ಟ್ 23 ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಪ್ರಜಾಸತ್ತಾತಕವಾಗಿ ಚುನಾಯಿತ ಸರ್ಕಾರವನ್ನು ನಾಜಿ ಜರ್ಮನಿಯ ಸಿದ್ಧಾಂತದಿಂದ ಉತ್ತೇಜಿತವಾದ ಸರ್ವಾಧಿಕಾರದೊಂದಿಗೆ ಬದಲಿಸಲು ಕಂದುಲಾ ಉದ್ದೇಶಿಸಿದ್ದ ಎಂದು ಅಟಾರ್ನಿ ವ್ಯಾಥ್ಯೂ ಗ್ರೇವ್ ಹೇಳಿದ್ದಾರೆ.
ತನ್ನ ಉದ್ದೇಶವನ್ನು ಸಾಧಿಸಲು ಅಗತ್ಯವಿದ್ದಲ್ಲಿ ಯುಎಸ್ ಅಧ್ಯಕ್ಷ ಮತ್ತು ಇತರರನ್ನು ಕೊಲ್ಲಲು ತಾನು ವ್ಯವಸ್ಥೆ ಮಾಡಿದ್ದೇನೆ ಎಂದು ಕಂದುಲಾ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅವರ ಕ್ರಮಗಳು ಬೆದರಿಕೆ ಅಥವಾ ಬಲವಂತದ ಮೂಲಕ ಸರ್ಕಾರದ ನಡವಳಿಕೆಯ ಮೇಲೆ ಪ್ರಭಾವ ಬೀರಲು ಅಥವಾ ಪರಿಣಾಮ ಬೀರಲು ಲೆಕ್ಕಹಾಕಲಾಗಿದೆ ಎಂದು ನ್ಯಾಯಾಂಗ ಇಲಾಖೆ ಹೇಳಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಕಂದುಲಾ ಅವರು ಮೇ 22, 2023 ರ ಮಧ್ಯಾಹ್ನ ಸೇಂಟ್ ಲೂಯಿಸ್ನಿಂದ ವಾಷಿಂಗ್ಟನ್ ಡಿಸಿಗೆ ವಾಣಿಜ್ಯ ವಿಮಾನದಲ್ಲಿ ಏಕಮುಖ ವಿಮಾನಯಾನ ಟಿಕೆಟ್ನಲ್ಲಿ ಪ್ರಯಾಣಿಸಿದ್ದ. ಸಂಜೆ 5.20ರ ಸುಮಾರಿಗೆ ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಂದುಲಾ, ಸಂಜೆ 6.30ಕ್ಕೆ ಟ್ರಕ್ ಅನ್ನು ಬಾಡಿಗೆಗೆ ಪಡೆದಿದ್ದರು.