ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಔಪಚಾರಿಕವಾಗಿ ಆಯ್ಕೆ ಮಾಡಲಾಗಿದೆ.
ಡೊನಾಲ್ಡ್ ಟ್ರಂಪ್ ನಾಮನಿರ್ದೇಶನದ ಕುರಿತು ಸೋಮವಾರ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಘೋಷಿಸಲಾಗಿದೆ. ಇದರೊಂದಿಗೆ 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಟ್ರಂಪ್ ಅವರು ಮತ್ತೆ ಅಧಿಕೃತವಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ 78 ವರ್ಷದ ಟ್ರಂಪ್, 2020ರಲ್ಲಿ ಜೋ ಬೈಡನ್ ವಿರುದ್ಧ ಸೋಲು ಕಂಡಿದ್ದರು. ಈಗ ಸತತ ಮೂರನೇ ಬಾರಿಗೆ ರಿಪಬ್ಲಿಕನ್ ಪಕ್ಷದಿಂದ ನಾಮನಿರ್ದೇಶನಗೊಂಡಿದ್ದಾರೆ.
ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಜೆಡಿ ವ್ಯಾನ್ಸ್ ಅವರನ್ನು ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ವ್ಯಾನ್ಸ್, ಭಾರತೀಯ ಸಂಜಾತೆಯಾಗಿದ್ದಾರೆ.
ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಶನಿವಾರ ಸಂಜೆ ನಡೆದಿದ್ದ ಚುನಾವಣಾ ಸಮಾವೇಶದಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಟ್ರಂಪ್, ಕಿವಿಗೆ ಬ್ಯಾಂಡೇಜ್ ಸುತ್ತಿಕೊಂಡು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.