ನವದೆಹಲಿ: ಪ್ರಜಾಪ್ರಭುತ್ವ ಉಳಿಸುವ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಶ್ರಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ. ಮಾನಹಾನಿ ಪ್ರಕರಣದಲ್ಲಿ (Defamation Case) ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೂರತ್ ಜಿಲ್ಲಾ ನ್ಯಾಯಲಯದ ಆದೇಶ ಪ್ರಶ್ನಿಸಿ ಸೆಷನ್ಸ್ ನ್ಯಾಯಲಯಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಮೇಲ್ಮನವಿ ಅರ್ಜಿಯನ್ನು ಮೇ 3 ರಂದು ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ. ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 13ರ ವರೆಗೂ ಜಾಮೀನು ವಿಸ್ತರಿಸಿದೆ.
ಜಾಮೀನು ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ʻಸತ್ಯವೇ ನನ್ನ ಅಸ್ತ್ರʼ ಎಂದು ಗುಡುಗಿದ್ದಾರೆ. ಅಲ್ಲದೇ ಇದು ʻಮಿತ್ರಕಾಲʼದ ವಿರುದ್ಧ ಪ್ರಜಾಪ್ರಭುತ್ವ ಉಳಿಸುವ ಹೋರಾಟ. ಈ ಹೋರಾಟದಲ್ಲಿ ಸತ್ಯವೇ ನನ್ನ ಅಸ್ತ್ರ, ಸತ್ಯವೇ ನನಗೆ ಆಶ್ರಯ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಜಿಲ್ಲಾ ಕೋರ್ಟ್ (Surat Court) ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.