ನಮ್ಮ ದೇಹದ ಯಾವುದೇ ಭಾಗಕ್ಕೆ ಯಾವುದೇ ತರಹದ ನೋವು ಬಂದರೂ ಕೂಡ ಸ್ವಲ್ಪ ಪ್ರಮಾಣದಲ್ಲಿ ನಾವು ಸಹಿಸಿಕೊಳ್ಳುವ ಶಕ್ತಿ ಪಡೆದುಕೊಂಡಿರುತ್ತೇವೆ. ಆದರೆ ತಲೆನೋವು ಬಂದರೆ ಮಾತ್ರ ಯಾವುದೇ ಕೆಲಸಗಳನ್ನು ಮಾಡಲಾಗದೆ ಯಾವುದರ ಮೇಲೂ ಆಸಕ್ತಿ ಇಲ್ಲದೆ ತಲೆ ಮೇಲೆ ಕೈಹೊತ್ತು ಕೂರಬೇಕಾಗುತ್ತದೆ.
ಅದರಲ್ಲೂ ಅಪ್ಪಿತಪ್ಪಿ ಬರುವ ತಲೆನೋವು ಮೈಗ್ರೇನ್ ಆಗಿದ್ದರೆ, ಕಥೆ ಮುಗಿಯಿತು. ವಿವಿಧ ಬಗೆಯ ಆರೋಗ್ಯದ ಅಡ್ಡ ಪರಿಣಾಮಗಳನ್ನು ಇದರಿಂದ ಎದುರಿಸಬೇಕಾಗಿ ಬರುತ್ತದೆ. ಆದರೆ ತಲೆನೋವು ಬಂದ ತಕ್ಷಣ ಈ ಕೆಳಗಿನ ಕೆಲವೊಂದು ಮನೆಮದ್ದುಗಳನ್ನು ಟ್ರೈ ಮಾಡುವುದರಿಂದ ಬಹಳ ಬೇಗನೆ ತಲೆನೋವಿನ ಸಮಸ್ಯೆಯಿಂದ ಹೊರಬರಬಹುದು.
ಮಸಾಜ್ ಮಾಡುವುದು
ಒಂದು ವೇಳೆ ನಿಮ್ಮ ತಲೆನೋವು ಹಣೆಯ ಮುಂಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ, ನಿಮ್ಮ ಎರಡು ಬೆರಳುಗಳಿಂದ ನಿಮ್ಮ ಮೂಗಿನ ಭಾಗದಲ್ಲಿ ನಿಮ್ಮ ಕಣ್ಣು ಹುಬ್ಬುಗಳ ಮಧ್ಯದಲ್ಲಿ ಸ್ವಲ್ಪ ಹೊತ್ತು ಒತ್ತಿಹಿಡಿದು ವೃತ್ತಾಕಾರವಾಗಿ ಮಸಾಜ್ ಮಾಡಿ. ಇದು ನಿಮ್ಮ ಹಣೆಯ ಮುಂಭಾಗದ ಭಾಗವನ್ನು ನೋವಿನಿಂದ ಮುಕ್ತ ಮಾಡುತ್ತದೆ.
ಒಂದು ವೇಳೆ ನಿಮ್ಮ ತಲೆನೋವು ಅತಿಹೆಚ್ಚಿನ ಪ್ರಮಾಣದಲ್ಲಿ ಎಲ್ಲಾ ಕಡೆಯಿಂದಲೂ ಬಾಧೆ ಕೊಡುತ್ತಿದ್ದರೆ, ನಿಮ್ಮ ನೆತ್ತಿಯ ಭಾಗವನ್ನು ಪುದಿನ ಎಣ್ಣೆ ಅಥವಾ ಲ್ಯಾವೆಂಡರ್ ಆಯಿಲ್ ಹಾಕಿ ಚೆನ್ನಾಗಿ ಮಸಾಜ್ ಮಾಡಿ. ನೆತ್ತಿಯ ಭಾಗದಲ್ಲಿ ಚೆನ್ನಾಗಿ ಮಸಾಜ್ ಮಾಡುವುದರಿಂದ, ನಿಮ್ಮ ತಲೆಯ ಭಾಗ ನೋವಿನಿಂದ ಮುಕ್ತಗೊಳ್ಳುತ್ತದೆ.
ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ತಾಪಮಾನದ ಕಾರಣ ಅಂದರೆ ಪಿತ್ತ ಪ್ರಭಾವದಿಂದ ತಲೆನೋವು ಉಂಟಾಗುತ್ತದೆ. ಇದರಿಂದ ಪರಿಹಾರ ಹೊಂದಲು ನಮ್ಮ ದೇಹವನ್ನು ಸಾಧ್ಯವಾದಷ್ಟು ತಂಪಾಗಿ ಇರಿಸಿಕೊಳ್ಳಲು ಪ್ರಯತ್ನಪಡಬೇಕು.
ಇದಕ್ಕಾಗಿ ಒಂದು ಲೋಟ ಮಜ್ಜಿಗೆ, ಹೆಚ್ಚಿನ ಪ್ರಮಾಣದಲ್ಲಿ ನೀರು, ಏಳನೀರು ಇತ್ಯಾದಿಗಳನ್ನು ಸೇವನೆ ಮಾಡುವುದು ಅಥವಾ ಅಪ್ಪಟ ಹರಳೆಣ್ಣೆಯನ್ನು ನೆತ್ತಿಯ ಭಾಗಕ್ಕೆ ಹಾಗೂ ಅಂಗಾಲುಗಳ ಭಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು ಜೊತೆಗೆ ಸೀಗೆಕಾಯಿ ಬಳಕೆ ಮಾಡಿದರೆ ಇನ್ನೂ ಒಳ್ಳೆಯದು. ನಿಮ್ಮ ಆಹಾರ ಪದ್ಧತಿಯಲ್ಲಿ ಗಸಗಸೆ, ತೆಂಗಿನಕಾಯಿ ಮತ್ತು ತುಪ್ಪವನ್ನು ಹೆಚ್ಚಾಗಿ ಬಳಕೆ ಮಾಡಿ.
ಶುಂಠಿ ಸೇವನೆ ಮಾಡಬಹುದು
ಶುಂಠಿ ತಲೆನೋವಿನ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಅಪ್ಪಿ ತಪ್ಪಿ ತಲೆನೋವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ತೊಂದರೆಯಿಂದ ಬಂದಿದ್ದರೆ, ಶುಂಠಿಯನ್ನು ತುರಿದು ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಒಲೆಯ ಮೇಲೆ ಚೆನ್ನಾಗಿ ಕುದಿಸಿ ಆ ನಂತರ ಅದನ್ನು ಸೇವನೆ ಮಾಡಿದರೆ ತಲೆನೋವಿನ ಪ್ರಲಾಪ ಕಡಿಮೆಯಾಗುತ್ತದೆ.
ಸರಿಯಾದ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು
ಯಾವುದಕ್ಕೂ ಬೆಳಗಿನ ಉಪಹಾರವನ್ನು ಕೈಬಿಡದೆ ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಆರೋಗ್ಯಕರವಾದ ಆಹಾರಗಳನ್ನು ಸೇವನೆ ಮಾಡುವುದರಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳಬಹುದು ಇದೇ ರೀತಿ ಮೈಗ್ರೇನ್ ಸಮಸ್ಯೆಯಿಂದ ಕೂಡ ಪಾರಾಗಬಹುದು.
ಕೆಲವೊಂದು ಆಹಾರ ಪದಾರ್ಥಗಳನ್ನು ತಲೆನೋವು ಇರುವವರು ಕಟ್ಟುನಿಟ್ಟಾಗಿ ಸೇವಿಸಬೇಕು. ಇನ್ನು ಕೆಲವು ಅಂದರೆ ಚೀಸ್, ಕಾಫಿ, ಚಾಕ್ಲೇಟ್ ಮತ್ತು ಚಹಾ ಇತ್ಯಾದಿಗಳನ್ನು ತಲೆನೋವು ಬಂದ ಸಮಯದಲ್ಲಿ ಸೇವನೆ ಮಾಡುವುದು ಬೇಡ. ಇವುಗಳಲ್ಲಿ ತಲೆನೋವನ್ನು ಹೆಚ್ಚು ಮಾಡುವ ಗುಣ ಲಕ್ಷಣಗಳು ಕಂಡುಬರುತ್ತದೆ.