ತಲೆಹೊಟ್ಟಿನ ಸಮಸ್ಯೆಯು ನಿಜವಾಗಿಯೂ ತುಂಬಾ ಅಸಹನೆ ಮತ್ತು ಹಿಂಸೆಗೆ ಕಾರಣವಾಗುವುದು. ಯಾಕೆಂದರೆ ನಾವು ಬಯಸಿದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ತಲೆಹೊಟ್ಟಿನಿಂದಾಗಿ ಸಾಧ್ಯವಾಗುವುದೇ ಇಲ್ಲ. ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಆಗ ತಲೆಹೊಟ್ಟು ಬಟ್ಟೆಯ ಮೇಲೆ ಬಂದು ಬಿದ್ದು ಯಾರ ಮುಂದೆಯೂ ಹೋಗಲು ಆತ್ಮವಿಶ್ವಾಸವೇ ಇಲ್ಲದಂತೆ ಆಗಬಹುದು.
ತಲೆಹೊಟ್ಟಿನಿಂದಾಗಿ ತಲೆಯಲ್ಲಿ ಪದೇ ಪದೇ ತುರಿಕೆ ಕಂಡುಬರಬಹುದು. ತಲೆಹೊಟ್ಟು ಎನ್ನುವುದು ತಲೆಯ ಸಾಮಾನ್ಯ ಸಮಸ್ಯೆ ಮತ್ತು ಚರ್ಮವು ಅಲ್ಲಿ ಬಿಳಿಯ ಪದರಗಳನ್ನು ಉಂಟು ಮಾಡುವುದು. ಇದು ಚರ್ಮದ ಸತ್ತಕೋಶಗಳ ಪದರವಾಗಿರುವುದು ಮತ್ತು ಇದರಿಂದ ಕೂದಲಿಗೆ ಸರಿಯಾಗಿ ಆಮ್ಲಜನಕವು ಸಿಗದೆ ಇರುವುದು.
ಹೀಗಾಗಿ ಕೂದಲು ಉದುರುವಿಕೆ ಹಾಗೂ ತುಂಡಾಗುವ ಸಮಸ್ಯೆಯು ಹೆಚ್ಚಾಗುವುದು. ತಲೆ ಹೊಟ್ಟಿಗೆ ಹಲವಾರು ರೀತಿಯ ಶಾಂಪೂ ಹಾಗೂ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದು ತಾತ್ಕಾಲಿಕ ಎನ್ನಬಹುದು. ಯಾಕೆಂದರೆ ಕೆಲವು ಸಮಯದ ಬಳಿಕ ತಲೆಹೊಟ್ಟು ಹಾಗೆ ಮರಕಳಿಸುವುದು ಎಂದು ಇದನ್ನು ಬಳಸಿದವರಿಗೆ ತಿಳಿದಿರುವುದು. ಕೂದಲಿನ ಸ್ವಚ್ಛತೆ ಕಾಪಾಡದೆ ಇರುವುದು, ಕೆಟ್ಟ ಆಹಾರ ಕ್ರಮ, ಒಣ ಚರ್ಮ ಮತ್ತು ಒತ್ತಡವು ತಲೆಹೊಟ್ಟಿಗೆ ಪ್ರಮುಖ ಕಾರಣವಾಗಿದೆ.
ತಲೆಹೊಟ್ಟಿಗೆ ಕೆಲವು ಕಾರಣಗಳು
ಈ ಕೆಳಗಿನವು ತಲೆಹೊಟ್ಟಿಗೆ ಕೆಲವೊಂದು ಪ್ರಮುಖ ಕಾರಣಗಳಾಗಿವೆ
*ಒಣಚರ್ಮ
*ಸರಿಯಾದ ಪೋಷಕಾಂಶಗಳ ಕೊರತೆ ಮತ್ತು ಅನಾರೋಗ್ಯ
*ಮಾನಸಿಕ ಒತ್ತಡ
*ಶಾಂಪೂ, ಕಂಡೀಷನರ್, ಕೂದಲಿನ ಬಣ್ಣಕ್ಕೆ ಸೂಕ್ಷ್ಮತೆ
*ಒಣ, ತಂಪಾದ, ಎಣ್ಣೆಯುಕ್ತ ಮತ್ತು ಮಸಾಲೆ ಪದಾರ್ಥಗಳ ಹೆಚ್ಚು ಸೇವನೆ
*ಅತಿಯಾದ ಎಣ್ಣೆಯ ಯೀಸ್ಟ್ ಅಥವಾ ಶಿಲೀಂಧ್ರ
*ಧೂಳು, ಬಿಸಿಲು, ಮಾಲಿನ್ಯ, ಕೆಲವು ಬಟ್ಟೆಗಳ ಅಲರ್ಜಿಗಳು
*ಕೆಲವೊಂದು ರೀತಿಯ ಆಹಾರಕ್ಕೆ ಅಲರ್ಜಿ ಉಂಟಾಗುವುದು. ತಲೆಹೊಟ್ಟನ್ನು ಆಯುರ್ವೇದ ವಿಧಾನದಿಂದ ನಿವಾರಣೆ ಮಾಡುವುದು ಹೇಗೆ ಎಂದು ತಿಳಿಯುವ
ಕರ್ಪೂರ ಮತ್ತು ತೆಂಗಿನ ಎಣ್ಣೆ
ಇದು ತಲೆಗೆ ಅತೀ ಸ್ನೇಹಿಯಾಗಿರುವಂತಹ ಮನೆಮದ್ದಾಗಿದೆ. ಸ್ವಲ್ಪ ಪ್ರಮಾಣದ ಕರ್ಪೂರವನ್ನು ನೀವು ತೆಂಗಿನ ಎಣ್ಣೆಯ ಜತೆಗೆ ಮಿಶ್ರಣ ಮಾಡಿ. ಇದನ್ನು ಒಂದು ಬಾಟಲಿಗೆ ಹಾಕಿಡಿ ಮತ್ತು ಪ್ರತಿನಿತ್ಯ ನೀವು ಮಲಗುವ ಮೊದಲು ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಕರ್ಪೂರವು ತಲೆಗೆ ತಂಪು ನೀಡುವುದು ಮತ್ತು ತಲೆಹೊಟ್ಟು ನಿವಾರಣೆ ಮಾಡುವುದು.
ಲಿಂಬೆ ಜತೆ ತೆಂಗಿನ ಎಣ್ಣೆ
ತಲೆಹೊಟ್ಟು ನಿವಾರಣೆ ಮಾಡಲು ಹೆಚ್ಚಾಗಿ ಲಿಂಬೆಯನ್ನು ಬಳಸಿಕೊಳ್ಳುವರು. ಬಿಸಿ ತೆಂಗಿನ ಎಣ್ಣೆಗೆ ಸ್ವಲ್ಪ ಲಿಂಬೆ ರಸ ಹಾಕಿ ಮಿಶ್ರಣ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ತೊಳೆಯಿರಿ. ಇದನ್ನು ನೀವು ವಾರದಲ್ಲಿ 2-3 ಸಲ ಮಾಡಿ.
ಆಲಿವ್ ತೈಲದೊಂದಿಗೆ ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಗೆ ಆಲಿವ್ ತೈಲ ಮಿಶ್ರಣ ಮಾಡಿ. ಸಕ್ಕರೆ ಪಾಕ ಮಾಡಿ ಮತ್ತು ಎಣ್ಣೆಯ ಮಸಾಜ್ ಬಳಿಕ ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ಶಾಂಪೂ ಹಾಕಿ ತೊಳೆಯಿರಿ. ಇದರ ಬಳಿಕ ಚಹಾ ನೀರು ಬಳಸಿ ಕೂದಲು ತೊಳೆಯಿರಿ. ಈ ವಿಧಾನವು ಕೂದಲಿಗೆ ಪೋಷಣೆಯ ಜತೆಗೆ ಒಳ್ಳೆಯ ರೀತಿಯಲ್ಲಿ ಬೆಳೆಯಲು ನೆರವಾಗುವುದು.
ಶ್ರೀಗಂಧದ ಎಣ್ಣೆ
ಇನ್ನೊಂದು ಮನೆಮದ್ದು ಎಂದರೆ ಅದು ಶ್ರೀಗಂಧದ ಎಣ್ಣೆಗೆ ಲಿಂಬೆ ರಸ ಮಿಶ್ರಣ ಮಾಡುವುದು. ಇದನ್ನು ಕೆಲವು ನಿಮಿಷ ಕಾಲ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ. ಮಸಾಜ್ ನಿಂದಾಗಿ ರಕ್ತ ಪರಿಚಲನೆಯು ಹೆಚ್ಚಾಗುವುದು ಮತ್ತು ಕೂದಲಿನ ಬುಡವು ಬಲಗೊಳ್ಳುವುದು.
ಬೇವಿನ ಜತೆಗೆ ಲಿಂಬೆ
ಲಿಂಬೆ ರಸದ ಜತೆಗೆ ಬೇವಿನ ಎಲೆಗಳ ಮಿಶ್ರಣವು ಅದ್ಭುತವನ್ನು ಉಂಟು ಮಾಡುವುದು. ಇದು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡುವುದು. ಬೇವಿನ ಎಲೆಗಳ ಪೇಸ್ಟ್ ಮಾಡಿ ಮತ್ತು ಇದನ್ನು ಅರ್ಧ ಲಿಂಬೆಯ ರಸಕ್ಕೆ ಇದನ್ನು ಬೆರೆಸಿಕೊಳ್ಳಿ ಮತ್ತು ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ. ಇದನ್ನು ಅರ್ಧ ಗಂಟೆ ಕಾಲ ಹಾಗೆ ಬಿಡಿ. ಉತ್ತಮ ಫಲಿತಾಂಶಕ್ಕಾಗಿ ನೀವು ವಾರದಲ್ಲಿ ಎರಡು ಸಲ ಇದನ್ನು ಬಳಸಿ.
ಮೆಂತ್ಯೆ ಕಾಳುಗಳು
ಮೆಂತ್ಯೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಇದನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ನ್ನು ತಲೆಬುರುಡೆಗೆ ಹಚ್ಚಿಕೊಳ್ಳಿ ಮತ್ತು 30-40 ನಿಮಿಷ ಕಾಲ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಇದು ತಲೆಹೊಟ್ಟು ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಎಂದು ಸಾಬೀತು ಆಗಿದೆ. ಇದರೊಂದಿಗೆ ತಲೆಬುರುಡೆಯ ಇತರ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡುವುದು.
ಅಲೋವೆರಾ
ಅಲೋವೆರಾದ ದಪ್ಪಗಿನ ಲೋಳೆಯು ತಲೆಹೊಟ್ಟು ನಿವಾರಣೆ ಮಾಡಲು ಸರಿಯಾದ ಮನೆಮದ್ದು. ಈ ಲೋಳೆಯನ್ನು ಕೂದಲಿಗೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ರಾತ್ರಿಯಿಡಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ನೀವು ಕೂದಲಿಗೆ ಶಾಂಪೂ ಹಾಕಿ ತೊಳೆಯಿರಿ.
ನೆಲ್ಲಿಕಾಯಿ ಪೇಸ್ಟ್
ತುಂಬಾ ಸರಳವಾಗಿ ಇರುವಂತಹ ತಲೆಹೊಟ್ಟು ನಿವಾರಣೆ ಮಾಡುವ ಪೇಸ್ಟ್ ನ್ನು ನೀವು ತಯಾರಿಸಬಹುದು. ನೆಲ್ಲಿಕಾಯಿ ಹುಡಿ, ತುಳಸಿ ಎಲೆಗಳ ಹುಡಿಯನ್ನು ನೀರಿನ ಜತೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ತೊಳೆಯುವ ಮೊದಲು 30-40 ನಿಮಿಷ ಕಾಲ ಹಾಗೆ ಇರಲಿ.