ತುಮಕೂರು : ತುಮಕೂರಿನ ಕೆಸರುಮಡು ಗ್ರಾಮದಲ್ಲಿ ಸೋಮವಾರ ನಡೆಯಬೇಕಿದ್ದ ಜಾತ್ರೆಯು ಕರಗಲಮ್ಮ ದೇವಿಯ (Karalagamma Devi) ವೀರಗಲ್ಲು ಇದ್ದ ಪ್ರದೇಶ ಮತ್ತು ಅಲ್ಲಿ ಪೂಜೆ ಮಾಡುವ ವಿಚಾರವಾಗಿ ರದ್ದಾಗಿತ್ತು. ಜಾತ್ರೆ ರದ್ದಾಗಿದ್ದಕ್ಕೆ ಕೆಸರುಮಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ನಿನ್ನೆ ಎರಡೂ ಕೋಮಿನ ಮುಖ್ಯಸ್ಥರೊಂದಿಗೆ ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಸಂಧಾನ ಸಭೆ ನಡೆಸಿದರು. ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಂದು ಜಾತ್ರೆಯನ್ನು ಊರಿನವರೆಲ್ಲ ಆರತಿ, ಮೆರವಣಿಗೆ ಮಾಡುವುದರ ಮೂಲಕ ಅದ್ದೂರಿಯಾಗಿ ನೆರವೇರಿಸಿದರು.
ಎರಡು ಕೋಮುಗಳ ಸಾಮರಸ್ಯಕ್ಕೆ ಧಕ್ಕೆಯಾಗಿದ್ದರಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಹಶಿಲ್ದಾರ್ ಸಿದ್ದೇಶ್ ಅವರು ಜಾತ್ರೆಗೆ ಸ್ಟೇ ನೀಡಿದ್ದರು. ಮಸೀದಿ ಪಕ್ಕದಲ್ಲಿದ್ದ ಕಲ್ಲಿಗೆ ಪೂಜೆ ಸಲ್ಲಿಸಬಾರದೆಂದು ಮುಸ್ಲಿಂ ಮುಖಂಡರು ಸ್ಟೇ ತಂದಿದ್ದರು. ಹೀಗಾಗಿ ಎಸ್ಪಿ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಿಂದ ಸಮಸ್ಯೆ ಇಥ್ಯರ್ತ ಮಾಡಿದರು. ಅದೇ ಕಾರಣಕ್ಕೆ ಕರಗಲಮ್ಮ ಜಾತ್ರೆಯು ಪೊಲೀಸ್ ಬಂದೋಬಸ್ತ್ ನಲ್ಲಿ ನಡೆಸಲಾಯಿತು. ಸದ್ಯ ಕೆಸರುಮಡು ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯಿಂದ ಜಾತ್ರೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.