ಬೆಂಗಳೂರು:– ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ಯಶಸ್ವಿ ಆಗಿದ್ದು, DCM ಡಿಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ‘ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಎಲ್ಲರೂ ಒಟ್ಟಾಗಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ಎಂದರು.
ರಾಜ್ಯದ ತುಂಗಭದ್ರಾ ಅಣೆಕಟ್ಟಿನಲ್ಲಿ 19 ನೇ ಗೇಟ್ ಚೈನ್ ಕಟ್ ಆಗಿ 35 ಟಿಎಂಸಿ ನೀರು ಲಾಸ್ ಆಗಿದೆ. ನಾವೆಲ್ಲ ಗಾಬರಿ ಆಗಿದ್ದೆವು, ದೊಡ್ಡ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇತ್ತು. ಇನ್ನು ನಾವೆಲ್ಲ ಆತಂಕದಲ್ಲಿ ಇದ್ದೆವು, ಸ್ಥಳೀಯ ಅಧಿಕಾರಿಗಳು, ಸಚಿವರು ಹಾಗೂ ಶಾಸಕರು ನಿಂತು ಕೆಲಸ ಮಾಡಿದ್ದಾರೆ.
ಸೆಟ್ ಆಫ್ ಡಿಸೈನ್ ಡಾಕ್ಯುಮೆಂಟ್ ನಮ್ಮ ಬಳಿ ಇತ್ತು. ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರ ಹತ್ತಿರ ಚರ್ಚೆ ಮಾಡಿ ರಿಸ್ಟೋರ್ ಮಾಡಲು ಮುಂದಾದೆವು. ರಾಜ್ಯ ಸರ್ಕಾರ, ರೈತರ ಪರವಾಗಿ ಎಲ್ಲರೂ ದುಡಿದಿದ್ದಾರೆ. ಇದೀಗ ಕ್ರೆಸ್ಟ್ ಗೇಟ್ ಅಳವಡಿಸಿದ್ದಾರೆ. ಈ ಮೂಲಕ ನಮಗೆ ಇದ್ದ ಭಯವನ್ನು ದೂರ ಮಾಡಿದ್ದಾರೆ.
ಮುಂದೆ ಅದಕ್ಕೆ ಏನು ಬೇಕೋ ಅದನ್ನ ನಾವು ಮಾಡುತ್ತೇವೆ. ಜಲಾಶಯಕ್ಕೆ 65 ಸಾವಿರ ಕ್ಯೂಸೆಕ್ ಒಳ ಹರಿವಿದೆ. ದುರಸ್ತಿ ಕೆಲಸದಲ್ಲಿ ಭಾಗಿಯಾದ ಕನ್ನಯ್ಯ ನಾಯ್ಡು ಮತ್ತು ತಂಡಕ್ಕೆ ಸರ್ಕಾರದಿಂದ ಅಭಿನಂದನೆಗಳು. ಹಗಲೂ ರಾತ್ರಿ ಕೆಲಸ ಮಾಡಿ ರಾಜ್ಯಕ್ಕೆ ದೊಡ್ಡ ಗೌರವ ಕೊಟ್ಟಿದ್ದಾರೆ. ಅವರಿಗೆ ಸತ್ಕಾರ ಮಾಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.