ಬಳ್ಳಾರಿ: ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು ನದಿಗೆ 83,649 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. 105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 102. 576 ಟಿಎಂಸಿ ನೀರು ಸಂಗ್ರಹವಾಗಿದ್ದು, 28 ಕ್ರಸ್ಟ್ ಗೇಟ್ಗಳನ್ನು ತೆರೆಯುವ ಮೂಲಕ ನದಿಗೆ ನೀರು ಹರಿಸಲಾಗಿದೆ.
ವಿಜಯನಗರ ಕಾಲುವೆ, ಎಡದಂಡೆ ಹಾಗೂ ಬಲದಂಡೆ ಕಾಲುವೆಗೂ ಸಹ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯಕ್ಕೆ ಸದ್ಯ 81030 ಕ್ಯೂಸೆಕ್ ನೀರು ಒಳಹರಿವು ಇದ್ದು, ಒಳಹರಿವಿನ ಪ್ರಮಾಣದಲ್ಲೇ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಅಪಾರ ಪ್ರಮಾಣದ ನೀರು ನದಿಗೆ ಹರಿಸಿದ್ದರಿಂದ ಹಂಪಿಯ ಸಾಲು ಮಂಟಪ, ವಿಧಿ ವಿಧಾನ ಮಂಟಪ ಹಾಗೂ ಕೋದಂಡ ರಾಮ ದೇವಸ್ಥಾನಕ್ಕೆ ಮುಳುಗಡೆಯ ಭೀತಿ ಎದುರಾಗಿದೆ.
ನದಿಗೆ ಈಗಾಗಲೇ ನೀರು ಬಿಟ್ಟಿದ್ದರಿಂದ ನದಿಯಲ್ಲಿನ ಹಂಪಿಯ ಕೆಲ ಸ್ಮಾರಕಗಳು ಮುಳುಗಡೆಯಾಗಿವೆ. ಭಾರೀ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿ ಪಾತ್ರಕ್ಕೆ ಜನರು ಮತ್ತು ಜಾನುವಾರುಗಳು ತೆರಳದಂತೆ ಜನರಿಗೆ ಡಂಗುರ ಸಾರಿ ಎಚ್ಚರಿಕೆ ನೀಡಲಾಗುತ್ತಿದೆ. ನದಿಗೆ ಅಳವಡಿಸಿದ್ದ ಪಂಪಸೆಟ್ ಮೋಟರ್ಗಳನ್ನ ತೆರವುಗೊಳಿಸಬೇಕು. ಮೀನುಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.