ಹಿಂದಿ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದ ಡಾಲಿ ಸೋಹಿ ಹಾಗೂ ಅಮನ್ದೀಪ್ ಸೋಹಿ ಸಹೋಧರಿಯರು ಕೆಲವೇ ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಒಬ್ಬರು ಜಾಂಡಿಸ್ಗೆ ಮೃತಪಟ್ಟರೆ ಮತ್ತೊಬ್ಬರು ಗರ್ಭಕಂಠ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.
ನಟಿ ಅಮನ್ದೀಪ್ ಅವರಿಗೆ ಹಲವು ದಿನಗಳ ಹಿಂದೆ ಜಾಂಡಿಸ್ ಆಗಿತ್ತು. ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಅಮನ್ ದೀಪ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಸಹೋದರಿ ಸೋಹಿ ಕ್ಯಾನ್ಸರ್ನಿಂದ ಬಳಲುತ್ತಿದ್ದು ಕೊನೆಯುಸಿರು ಎಳೆದಿದ್ದಾರೆ. ಸಹೋದರಿಯರ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.
‘ನಮ್ಮ ಪ್ರೀತಿಯ ಅಮನ್ದೀಪ್ ಸೋಹಿ ಅವರು ಇಂದು ಸ್ವರ್ಗಸ್ಥರಾಗಿದ್ದಾರೆ. ನಾವು ಅವರನ್ನು ಕಳೆದುಕೊಂಡು ಶಾಕ್ಗೆ ಒಳಗಾಗಿದ್ದೇವೆ. ಇಂದು (ಮಾರ್ಚ್ 8) ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಲಿದೆ’ ಎಂದು ಡಾಲಿ ಸೋಹಿ ಅವರ ಸಹೋದರ ಮನು ಗುರುವಾರ ಹೇಳಿದ್ದರು. ಇದಾದ ಬೆನ್ನಲ್ಲೇ ಡಾಲಿ ಸಾವನಪ್ಪಿದ್ದಾರೆ.
ಡಾಲಿ ಸೋಹಿ ಅವರು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 2000ರಲ್ಲಿ ಪ್ರಸಾರ ಆರಂಭಿಸಿದ ‘ಕಲಾಶ್’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. 2022ರಲ್ಲಿ ಪ್ರಸಾರ ಕಂಡ ‘ಸಿಂಧೂರ್ ಕಿ ಕಿಮತ್’ ಅವರ ನಟನೆಯ ಕೊನೆಯ ಧಾರಾವಾಹಿ. ಅಮನ್ದೀಪ್ ಅವರು ಕೂಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಸಹೋದರಿಯರ ಏಕಾಏಕಿ ಸಾವು ಕಿರುತೆರೆ ಲೋಕಕ್ಕೆ ದೊಡ್ಡ ಶಾಕ್ ನೀಡಿದೆ.