ವಾಷಿಂಗ್ಟನ್: ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ’ಎಕ್ಸ್’ (ಟ್ವಿಟ್ಟರ್) ತನ್ನ ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಳ್ಳುತ್ತಿದೆ ಎಂದು ಸಿಇಒ ಲಿಂಡಾ ಯಾಕರಿನೊ (Linda Yaccarino) ತಿಳಿಸಿದ್ದಾರೆ. ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಲಿಂಡಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬಳಕೆದಾರರಿಗೆ ಸಂಬಂಧಿಸಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. ಕಂಪನಿಯು ಪ್ರಸ್ತುತ 225 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಆದೆ ಎಲೋನ್ ಮಸ್ಕ್ (Elon Musk) ಅವರು ಟ್ವಿಟ್ಟರ್ ವಹಿಸಿಕೊಂಡ ನಂತರ 11.06% ಬಳಕೆದಾರರ ಸಂಖ್ಯೆ ಕುಸಿತ ಕಂಡಿದೆ ಎಂದಿದ್ದಾರೆ.
ಕಳೆದ ವರ್ಷ ಎಲೋನ್ ಮಸ್ಕ್ ಅವರು ಟ್ವಿಟ್ಟರ್ ವಹಿಸಿಕೊಳ್ಳುವುದಕ್ಕೂ ಮುನ್ನ ಮೊದಲು 254.5 ಮಿಲಿಯನ್ ಬಳಕೆದಾರರಿದ್ದರು. 2022 ರ ನವೆಂಬರ್ ಮಧ್ಯದಲ್ಲಿ ಟ್ವಿಟ್ಟರ್ 259.4 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. X ಸುಮಾರು 1.5 ಕೋಟಿ ಬಳಕೆದಾರರನ್ನು ಕಳೆದುಕೊಂಡಿದೆ. ಆ ಮೂಲಕ ಸರಿಸುಮಾರು 5.6% ರಷ್ಟು ಕುಸಿತ ಕಂಡಿದೆ. 2024 ರ ಹೊತ್ತಿಗೆ ಎಕ್ಸ್ ಲಾಭದಾಯಕವಾಗಲಿದೆ. ನಾನು ಈಗ ಲಾಭದಾಯಕ ವ್ಯವಹಾರದಲ್ಲಿ ತೊಡಗಿದ್ದೇನೆ. ಮುಂದಿನ ದಿನಗಳಲ್ಲಿ ಲಾಭ ಗಳಿಸುತ್ತೇವೆ ಎಂದು ಸಿಇಒ ಆಶಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಎಲೋನ್ ಮಸ್ಕ್ 3.60 ಲಕ್ಷ ಕೋಟಿ ಮೊತ್ತಕ್ಕೆ ಟ್ವಿಟ್ಟರ್ ಕಂಪನಿಯನ್ನು ಖರೀದಿ ಮಾಡಿದ್ದರು.