ಅಮೆರಿಕದಿಂದ ಲಕ್ಷಾಂತರ ಭಾರತೀಯರ ಮಕ್ಕಳು ಗಡಿಪಾರು: ಕಾರಣವೇನು?
ಉದ್ಯೋಗ ಹಾಗೂ ಉತ್ತಮ ಭವಿಷ್ಯದ ಕನಸನ್ನು ಹೊತ್ತು ಭಾರತದಿಂದ ಅಮೆರಿಕಗೆ ಕಾನೂನುಬದ್ಧವಾಗಿ ವಲಸೆ ಹೋದ ಲಕ್ಷಾಂತರ ಭಾರತೀಯರು ಇದೀಗ ತಮ್ಮ ಮಕ್ಕಳನ್ನು ವಾಪಸ್ ಭಾರತಕ್ಕೆ ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಮೆರಿಕದ ವಲಸೆ ಕಾನೂನಿನ ಕಾರಣದಿಂದಾಗಿ ಭಾರತೀಯ ಮಕ್ಕಳು ವಾಪಸ್ ತವರಿಗೆ ಆಗಮಿಸಬೇಕಾದದ್ದು ಅನಿವಾರ್ಯವಾಗಿದೆ.
ಅಮೆರಿಕದಲ್ಲಿ ಕೆಲಸ ಸಿಕ್ಕ ಬಳಿಕ ಹೊರಟ ಪೋಷಕರು ಭಾರತದಲ್ಲೇ ಹುಟ್ಟಿ ಬೆಳೆದ ತಮ್ಮ ಮಕ್ಕಳನ್ನೂ ಜೊತೆಗೆ ಕರೆದೊಯ್ದಿದ್ದಾರೆ. ಹೆತ್ತವರ ಜೊತೆ ಬಾಲ್ಯದಲ್ಲೇ ಅಮೆರಿಕ ಸೇರಿದ ಮಕ್ಕಳು, ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಆದರೆ ಅಮೆರಿಕ ದೇಶದ ಕಾನೂನಿನ ಪ್ರಕಾರ ಬೇರೆ ದೇಶದ ಉದ್ಯೋಗಿಗಳ ಮಕ್ಕಳು, ಅಮೆರಿಕ ಪ್ರಜೆಗಳು ಅಲ್ಲವಾದರೆ 21 ವರ್ಷ ದಾಟಿದ ಬಳಿಕ ಅಮೆರಿಕದಲ್ಲಿ ಇರುವಂತಿಲ್ಲ ಎಂಬ ನಿಯಮವಿದೆ.
ಅಮೆರಿಕದಲ್ಲೇ ಹುಟ್ಟಿದ ಮಕ್ಕಳಿಗೆ ಸಹಜವಾಗಿಯೇ ಅಮೆರಿಕ ಪೌರತ್ವ ಸಿಗುವ ಕಾರಣ ಅವರಿಗೆ ಸಮಸ್ಯೆ ಇಲ್ಲ. ಆದರೆ, ಭಾರತದಲ್ಲಿ ಹುಟ್ಟಿದ ಮಕ್ಕಳನ್ನು ಅಮೆರಿಕಗೆ ಕರೆದೊಯ್ದ ಪೋಷಕರಿಗೆ ಇದೀಗ ಸಂಕಷ್ಟ ಶುರುವಾಗಿದೆ. ಜೊತೆಯಲ್ಲೇ ದಶಕಗಳ ಕಾಲ ಅಮೆರಿಕದಲ್ಲೇ ಇದ್ದರೂ ಗ್ರೀನ್ ಕಾರ್ಡ್ ಸಿಗದ ಕಾರಣ, ಪೋಷಕರು ತಮ್ಮ ಮಕ್ಕಳನ್ನು ಅಮೆರಿಕದಲ್ಲೇ ಉಳಿಸಿಕೊಳ್ಳಲು ಅಲ್ಲಿನ ಕಾನೂನು ಅಡ್ಡಿಯಾಗುತ್ತಿದೆ.
ಭಾರತೀಯ – ಅಮೆರಿಕನ್ ದಂಪತಿಗಳ ಸುಮಾರು 2 ಲಕ್ಷದ 50 ಸಾವಿರ ಮಕ್ಕಳು ಇದೀಗ ಸಂಕಷ್ಟದಲ್ಲಿದ್ದಾರೆ. ಬಾಲ್ಯದಲ್ಲೇ ತಂದೆ – ತಾಯಿ ಜೊತೆ ಅಮೆರಿಕ ಸೇರಿದ ಈ ಮಕ್ಕಳಿಗೆ ಭಾರತದ ಸಂಪರ್ಕವೇ ಇಲ್ಲ. ಆದರೆ ಇದೀಗ ಭಾರತಕ್ಕೆ ವಾಪಸ್ ಬಂದು ಇಲ್ಲಿನ ಸನ್ನಿವೇಶಗಳಿಗೆ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಾಕಷ್ಟು ಪೋಷಕರು ಕೆಲಸ ತೊರೆದು ಭಾರತಕ್ಕೆ ಬಂದು ಬದುಕು ಕಟ್ಟಿಕೊಳ್ಳಬೇಕಾಗಿದೆ.