ಚಾಮರಾಜನಗರ: ಸರ್ಕಾರಿ ಶಾಲಾ ಕಟ್ಟಡದ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ ಗುತ್ತಿಗೆದಾರನಿಂದ 30 ಸಾವಿರ ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ಇಬ್ಬರು ಎಂಜಿನಿಯರ್ಗಳು ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಇಲಾಖೆಯ ಚಾಮರಾಜನಗರ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೆಂಪರಾಜು ಮತ್ತು ಕಿರಿಯ ಎಂಜಿನಿಯರ್ ಮಧುಸೂದನ್ ಬಲೆಗೆ ಬಿದ್ದವರು.
ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ.
ನಗರದ ಸೂರ್ಯ ಬಿಲ್ಡರ್ ಅಂಡ್ ಡೆವಲಪರ್ ಸಂಸ್ಥೆಯು ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶಾಲೆ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಲೋಕೋಪಯೋಗಿ ಇಲಾಖೆಯು ಬಿಲ್ ಹಣ ಮಂಜೂರು ಮಾಡಬೇಕಿತ್ತು, ಬಿಲ್ ಪಾವತಿಗಾಗಿ ಇಬ್ಬರೂ ಇಂಜಿನಿಯರ್ ಗಳೂ 30 ಸಾವಿರ ಲಂಚ ಕೇಳಿದ್ರು. ಈ ಸಂಬಂಧವಾಗಿ
ಗುತ್ತಿಗೆದಾರ ದೂರು ನೀಡಿದ್ದರು. ಶುಕ್ರವಾರ ಸಂಜೆ ಕಾಮಗಾರಿ ನಡೆದ ಸ್ಥಳದಲ್ಲಿ ಮಧುಸೂದನ್ ಅವರು ಗುತ್ತಿಗೆದಾರನಿಂದ 30 ಸಾವಿರ ಲಂಚ ಪಡೆದಿದ್ದಾರೆ. ಅಲ್ಲಿಂದ ಕಾರಿನಲ್ಲಿ ಬರುತ್ತಿದ್ದಾಗ ಕುದೇರು ಚಾಮುಲ್ ಘಟಕದ ಬಳಿ ಅಡ್ಡ ಕಟ್ಟಿ ವಶಕ್ಕೆ ಪಡೆಯಲಾಗಿದೆ.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಕೆ.ಟಿ.ಮ್ಯಾಥ್ ಥಾಮಸ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.