ಟೆಲ್ ಅವೀವ್: ಇತ್ತೀಚೆಗಷ್ಟೇ ಅಮೆರಿಕದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದ ಹಮಾಸ್ ಉಗ್ರರ ಗುಂಪು (Hamas Terrorists), ಗಾಜಾಪಟ್ಟಿಯಲ್ಲಿ ಮತ್ತಿಬ್ಬರು ವೃದ್ಧ ಒತ್ತೆಯಾಳುಗಳನ್ನು (Israel Hostage) ಮಾನವೀಯ ಕಾರಣಗಳಿಂದಾಗಿ ಬಿಡುಗಡೆ ಮಾಡಿದೆ. ಅವರನ್ನು ನೂರಿಟ್ ಕೂಪರ್ (79) ಹಾಗೂ ಯೋಚೆವೆಡ್ ಲಿಫ್ಶಿಟ್ಜ್ (85) ಎಂದು ಗುರುತಿಸಲಾಗಿದೆ.
ಬಿಡುಗಡೆಗೊಂಡ ಬಳಿಕ ಮಾತನಾಡಿರುವ ಯೋಚೆವೆಡ್ ಲಿಫ್ಶಿಟ್ಜ್, ಅಕ್ಟೋಬರ್ 7 ರಂದು ದಾಳಿ ನಡೆಸಿ ನಮ್ಮನ್ನು ಗಾಜಾಕ್ಕೆ ಕರೆದೊಯ್ಯುವಾಗ ಹಮಾಸ್ ಭಯೋತ್ಪಾದಕರು ನನ್ನನ್ನ ಥಳಿಸಿದ್ದರು. ಆದ್ರೆ ಪ್ಯಾಲೆಸ್ತೀನ್ ಎನ್ಕ್ಲೇವ್ನಲ್ಲಿ (Palestinian Enclave) ಸೆರೆಯಲ್ಲಿದ್ದಾಗ ಅವರೇ ನಮಗೆ ಚಿಕಿತ್ಸೆ ಕೊಡಿಸಿದರು. ಸುರಂಗದಲ್ಲಿ ಇರಿಸಿದ್ದರೂ ನಮ್ಮನ್ನು ಚೆನ್ನಾಗಿಯೇ ನೋಡಿಕೊಂಡರು ಎಂದು ಹೇಳಿದ್ದಾರೆ.
ಅದಕ್ಕೂ ಮುನ್ನ ನಮ್ಮನ್ನ ಗಾಜಾದಿಂದ ಕರೆದೊಯ್ಯುತ್ತಿದ್ದಾಗ ಬೈಕ್ನಲ್ಲಿ ಹಾಕಿಕೊಂಡು ಹೋಗ್ತಿದ್ರು. ಆಗ ನನ್ನ ತಲೆ ಒಂದು ಕಡೆಯಿದ್ದರೆ, ದೇಹದ ಉಳಿದ ಭಾಗ ಇನ್ನೊಂದು ಬದಿಯಲ್ಲಿತ್ತು. ದಾರಿಯುದ್ಧಕ್ಕೂ ನನ್ನಗೆ ಹೊಡೆಯುತ್ತಲೇ ಕರೆದುಕೊಂಡು ಹೋದರು. ಆ ಏಟಿನಿಂದ ನನಗೆ ಉಸಿರಾಡುವುದೂ ಕಷ್ಟವಾಗಿತ್ತು ಎಂದು ಕಹಿ ಅನುಭವ ಹೇಳಿಕೊಂಡಿದ್ದಾರೆ
ಇನ್ನೂ ಹಮಾಸ್ ಉಗ್ರರಿಂದ ಒತ್ತೆಯಾಳುಗಳನ್ನು ರಕ್ಷಿಸಲು ಪಣ ತೊಟ್ಟಿರುವ ಇಸ್ರೇಲ್ ರಕ್ಷಣಾ ಪಡೆಗಳು, ಹಮಾಸ್ ಗುಂಪು ಇಸ್ರೇಲಿ ಒತ್ತೆಯಾಳುಗಳನ್ನು ಇರಿಸಿರುವ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡಿದೆ. ಅದಕ್ಕಾಗಿ ಪ್ರತ್ಯೇಕ ಸಹಾಯವಾಣಿ ನೀಡಿದ್ದು, ಸೂಕ್ತ ಮಾಹಿತಿ ನೀಡಿದಲ್ಲಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಜೊತೆಗೆ ಮಾಹಿತಿ ನೀಡಿದವರ ಗೌಪ್ಯತೆ ಕಾಪಾಡುವುದಾಗಿ ಭರವಸೆ ನೀಡಿದೆ.
ಇಸ್ರೇಲ್ ಮೇಲೆ ಹಮಾಸ್ ಉಗ್ರರು ಹಾಗೂ ಗಾಜಾ ನಗರದ ಮೇಲೆ ಇಸ್ರೇಲ್ ಸೇನೆ ಮಾಡುತ್ತಿರುವ ಸತತ ದಾಳಿಯಿಂದಾಗಿ ಇದುವರೆಗೆ 6,400 ಜನ ಮೃತಪಟ್ಟಿದ್ದಾರೆ. ಇಸ್ರೇಲ್ ಮೇಲೆ ಹಮಾಸ್ ಮಾಡಿದ ದಾಳಿಯಿಂದ ಇದುವರೆಗೆ ಇಸ್ರೇಲ್ನಲ್ಲಿ 1,400 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗಾಜಾ ನಗರದಲ್ಲಿ ಇಸ್ರೇಲ್ ಸತತ ದಾಳಿಗೆ 5,000ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.