ಪಂದ್ಯದ ವೇಳೆ ಉಭಯ ತಂಡಗಳ ಆಟಗಾರರು ತೋರಿದ ದುರ್ವತನೆಗೆ ಅಸಮಾಧಾನಗೊಂಡಿರುವ ಐಸಿಸಿ, ಇಬ್ಬರೂ ಆಟಗಾರರನ್ನು ಶಿಕ್ಷೆಗೆ ಗುರಿಪಡಿಸಿದೆ. ಅದರಂತೆ ಮಹತ್ವದ ನಿರ್ಧಾರ ಕೈಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ವನಿಂದು ಹಸರಂಗ (Wanindu Hasaranga) ಅವರನ್ನು ಎರಡು ಪಂದ್ಯಗಳಿಂದ ಅಮಾನತುಗೊಳಿಸಲು ನಿರ್ಧರಿಸಿದೆ.
ಹಾಗೆಯೇ ಅಫ್ಘಾನಿಸ್ತಾನ ತಂಡದ ಆಟಗಾರ ರಹಮಾನುಲ್ಲಾ ಗುರ್ಬಾಜ್ಗೂ (Rahmanullah Gurbaz) ಐಸಿಸಿ ಶಿಕ್ಷೆ ವಿಧಿಸಿದ್ದು, ಪಂದ್ಯ ಶುಲ್ಕ ಮತ್ತು ಡಿಮೆರಿಟ್ ಪಾಯಿಂಟ್ಗಳನ್ನು ದಂಡವಾಗಿ ವಿಧಿಸಿದೆ. ಐಸಿಸಿ ವಿಧಿಸಿರುವ ಶಿಕ್ಷೆಯ ಅನುಸಾರ ಲಂಕಾ ನಾಯಕ ವನಿಂದು ಹಸರಂಗ ಇಡೀ ಸರಣಿಯಲ್ಲಿ ಒಟ್ಟು 5 ಡಿಮೆರಿಟ್ ಪಾಯಿಂಟ್ಗಳನ್ನು ಪಡೆದಿದ್ದಾರೆ.
ಹೀಗಾಗಿ ನಿಯಮಗಳ ಪ್ರಕಾರ, ಒಬ್ಬ ಆಟಗಾರ ಕಳೆದ ಎರಡು ವರ್ಷಗಳಲ್ಲಿ ಐದು ಡಿಮೆರಿಟ್ ಅಂಕಗಳನ್ನು ಪಡೆದರೆ, ಆತನಿಗೆ ಪಂದ್ಯದ ಶುಲ್ಕದ 50 ಪ್ರತಿಶತವನ್ನು ದಂಡವಾಗಿ ವಿಧಿಸಲಾಗುತ್ತದೆ ಮತ್ತು ಎರಡು ಪಂದ್ಯಗಳಿಂದ ಅಮಾನತುಗೊಳಿಸಲಾಗುತ್ತದೆ. ಅದರಂತೆ ಐದು ಡಿಮೆರಿಟ್ ಅಂಕ ಪಡೆದಿರುವ ಹಸರಂಗಗೆ ಎರಡು ಪಂದ್ಯಗಳಿಂದ ನಿಷೇಧ ಹಾಗೂ ಪಂದ್ಯದ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ.