ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಗಲಾಟೆ ದಿನದಿಂದ ದಿನಕ್ಕೆ ವಿವಿಧ ರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಗೌಡತಿ ಸೇನೆ ಹೆಸರಿನ ಸಂಘಟನೆಯು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ನೀಡಿದೆ. ಜೊತೆಗೆ ಈ ಪ್ರಕರಣ ವಾಣಿಜ್ಯ ಮಂಡಳಿಯ ಮೆಟ್ಟಿಲು ಏರಿದೆ. ಇದರ ಜೊತೆಗೆ ದರ್ಶನ್ ವಿರುದ್ಧ ಇನ್ನೂ ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಕ್ಕಳ ನಿಂದನೆ ಮತ್ತು ರಾಜ್ಯದ ಪ್ರಭಾವಿ ಸಮುದಾಯದ ನಾಯಕನಿಗೆ ಅವಮಾನ ಮಾಡಿದ ಹಿನ್ನೆಲೆಯಾಗಿಟ್ಟುಕೊಂಡು ದರ್ಶನ್ ವಿರುದ್ಧ ಆರ್.ಆರ್.ನಗರ ಮತ್ತು ಚಂದ್ರಲೇ ಔಟ್ ಠಾಣೆಯಲ್ಲಿ ಗಣೇಶ್ ಗೌಡ ಹಾಗೂ ಜಗದೀಶ್ ಎನ್ನುವರು ಎರಡು ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಜ್ಯದ ಪ್ರಭಾವಿ ಸಮುದಾಯದ ನಾಯಕರ ಬಗ್ಗೆ ಮತ್ತು ವೇದಿಕೆ ಮೇಲೆ ಹೆಣ್ಣು ಮಕ್ಕಳ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದರ್ಶನ್ ಅವರ ಮಾತು ಒಂದು ಸಮುದಾಯವನ್ನು ಕೆರಳಿಸುವಂತಿದೆ. ದರ್ಶನ್ ಗೆ ಹೆಣ್ಣು ಮಕ್ಕಳೆಂದರೆ ಆಟಿಕೆಯ ವಸ್ತುಗಳ ರೀತಿ ಬಳಸಿ ಬಿಸಾಡುವಂತ ಮಾತುಗಳಾಡಿದ್ದಾರೆ. ಇದು ಈ ರಾಜ್ಯದ ಮತ್ತು ದೇಶದ ಮಹಿಳಾ ಕುಲಕ್ಕೆ ಮಹಾ ಅಪಮಾನ. ಒಕ್ಕಲಿಗ ನಾಯಕರ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇದರಿಂದ ಒಂದು ಸಮುದಾಯ ರೊಚ್ಚಿಗೇಳುವ ಮುಂಚೆ ಕಾನೂನು ಕ್ರಮ ಕೈ ಗೊಳ್ಳುವಂತೆ ದೂರು ನೀಡಲಾಗಿದೆ.