ಪದವಿ ಪ್ರದಾನ ಸಮಾರಂಭದಲ್ಲಿ ಫ್ರೀ ಪ್ಯಾಲೆಸ್ತೀನ್ ಘೋಷಣೆ ಕೂಗಿದ ವಿದ್ಯಾರ್ಥಿಯನ್ನು ಯುಎಇ ದೇಶದಿಂದಲೇ ಗಡಿಪಾರು ಮಾಡಿದೆ.
ಅಬುಧಾಬಿಯಲ್ಲಿರುವ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಲ್ಲಿ ಮೇ ತಿಂಗಳಲ್ಲಿ ಪದವಿ ಪ್ರದಾನ ಸಮಾರಂಭ ನಡೆದಿತ್ತು. ಈ ವೇಳೆ ಸಾಂಪ್ರದಾಯಿಕ ಪ್ಯಾಲೆಸ್ಟೀನಿಯನ್ ಕಪ್ಪು-ಬಿಳುಪು ಕೆಫಿಯೆಹ್ ಸ್ಕಾರ್ಫ್ ಅನ್ನು ಧರಿಸಿದ ವಿದ್ಯಾರ್ಥಿಯೊಬ್ಬ ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದ್ದ.
ಘೋಷಣೆ ಕೂಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತಂದ ಹಿನ್ನೆಲೆಯಲ್ಲಿ ಆತನನ್ನು ಯುಎಇಯಿಂದ ಗಡಿಪಾರು ಮಾಡಲಾಗಿದೆ ಎಂದು ವರದಿಯಾಗಿದೆ. ಈ ವಿಚಾರಕ್ಕೆ ಯುಎಇ ಸರ್ಕಾರವನ್ನು ಸಂಪರ್ಕಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಥಳೀಯ ಮಾಧ್ಯಮ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪದವಿ ಪ್ರದಾನ ಸಮಾರಂಭಕ್ಕೆ ಮೊದಲೇ ವಿದ್ಯಾರ್ಥಿಗಳಿಗೆ ಎಲ್ಲಾ ನಿಯಮಗಳನ್ನು ತಿಳಿಸಲಾಗಿತ್ತು. ಕ್ಯಾಂಪಸ್ನಲ್ಲಿ ಎಲ್ಲಿಯೂ ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ. ವಸತಿ ಕಟ್ಟಡಗಳಲ್ಲಿಯೂ ಸಹ ಧ್ವಜ ಹಾರಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾನೆ. ಆದಗಿಯೂ ವಿದ್ಯಾರ್ಥಿಯ ಈ ವರ್ತನೆ ಸಾಕಷ್ಟುಮಂದಿಯ ಆಕ್ರೋಶಕ್ಕೆ ಕಾರಣವಾಗಿದ್ದು ಇದೀಗ ಆತನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.