ಬೆಂಗಳೂರು/ಉಡುಪಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಚೌಗಲೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಹೈಕೋರ್ಟ್ನ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಆರೋಪಿ ಅರುಣ್ ಚೌಗಲೆ 2023ರ ನವೆಂಬರ್ 12ರಂದು ಉಡುಪಿಯ ತೃಪ್ತಿ ಲೇಔಟ್ನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ್ದ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆಗಿತ್ತು.
ಪ್ರಕರಣಏನು?
2023ರ ನವೆಂಬರ್ 12ರಂದು ಸಂತೆಕಟ್ಟೆ ನೇಜಾರು ಸಮೀಪದ ತೃಪ್ತಿ ಲೇಔಟ್ನಲ್ಲಿ ಕೊಲೆ ನಡೆದಿತ್ತು. ವಿದೇಶದಲ್ಲಿದ್ದ ನೂರ್ ಮಹಮ್ಮದ್ ಕುಟುಂಬದ ನಾಲ್ವರ ಕೊಲೆಯಾಗಿತ್ತು. ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಪ್ರವೀಣ್ ಅರುಣ್ ಚೌಗುಲೆ ಬರ್ಬರವಾಗಿ ನಾಲ್ವರ ಹತ್ಯೆ ಮಾಡಿದ್ದ. ತನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಯ್ನಜ್ ಮೇಲೆ ಇದ್ದ ಅತಿಯಾದ ಗೆಳೆತನ, ಪ್ರೀತಿ, ವ್ಯಾಮೋಹ, ಕೆಲ ಸಮಯ ನಂತರ ಆಕೆ ಆತನನ್ನು ದೂರ ಮಾಡಿದ್ದಕ್ಕಾಗಿ ಹುಟ್ಟಿಕೊಂಡ ದ್ವೇಷಕ್ಕೆ ಪ್ರವೀಣ್ ಈ ಕೃತ್ಯ ಎಸಗಿದ್ದಾನೆ ಎಂಬ ವಿಚಾರ ತನಿಖೆಯಿಂದ ಪ್ರಕಟವಾಗಿದೆ.
ಮಗಳ ಮೇಲೆ ಮುಗಿಬಿದ್ದಾಗ ತಡೆಯಲು ಬಂದ ತಾಯಿ ಹಸೀನಾ, ಅಕ್ಕ ಅಫ್ನಾನ್ ಮತ್ತು ತಮ್ಮ ಆಸಿಂನನ್ನು ಇರಿದು ಕೊಂದಿದ್ದ. ತಲೆಮರೆಸಿಕೊಂಡು ಓಡಾಡಿದ್ದ ಆರೋಪಿಯನ್ನು ಬೆಳಗಾವಿ ಜಿಲ್ಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹ ಮಾಡಿದ್ದರು. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಕೃತ್ಯಕ್ಕೆ ಬಳಸಿದ್ದ ಅಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.