ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳು ಕೈಗೊಂಡಿದ್ದ ‘ಪರಿಶೀಲನೆ’ಯನ್ನು ಸಮರ್ಥಿಸಿಕೊಂಡಿರುವ ಸಚಿವ ಎಸ್.ಜೈಶಂಕರ್, ‘ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಂಪನಿಗಳು ಈ ನೆಲದ ಕಾನೂನು ಹಾಗೂ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಬ್ರಿಟನ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರಿಗೆ ಹೇಳಿದ್ದಾರೆ.
ಜಿ–20 ಗುಂಪಿನ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಕ್ಲೆವರ್ಲಿ ಅವರು, ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ ವೇಳೆ ಈ ವಿಷಯ ತಿಳಿಸಿದರು.
ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಇತ್ತೀಚೆಗೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧಿಕಾರಿಗಳು ‘ಪರಿಶೀಲನೆ’ ನಡೆಸಿದ್ದನ್ನು ಕ್ಲೆವರ್ಲಿ ಈ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬೆಳವಣಿಗೆ ಕುರಿತು ಪ್ರಧಾನಿ ರಿಷಿ ಸುನಕ್ ಕಳವಳ ವ್ಯಕ್ತಪಡಿಸಿದ್ದನ್ನು ವಿವರಿಸಿದಾಗ, ಜೈಶಂಕರ್ ಈ ಮಾತುಗಳನ್ನು ಹೇಳಿದರು ಎಂದು ಮೂಲಗಳು ತಿಳಿಸಿವೆ.
2002ರ ಗುಜರಾತ್ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ವಿವಾದಕ್ಕೆ ಕಾರಣವಾಗಿತ್ತು. ಈ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಈ ಕ್ರಮ ಕೈಗೊಂಡ ಕೆಲ ವಾರಗಳ ನಂತರ ಸಿಬಿಡಿಟಿ ಅಧಿಕಾರಿಗಳು ಬಿಬಿಸಿ ಕಚೇರಿಗಳಲ್ಲಿ ಮೂರು ದಿನಗಳ ಕಾಲ ‘ಪರಿಶೀಲನೆ’ ನಡೆಸಿದ್ದರು. ಈ ವಿಷಯವು ಬ್ರಿಟನ್ ಸಂಸತ್ನಲ್ಲಿಯೂ ಪ್ರತಿಧ್ವನಿಸಿತ್ತು.
‘ಬಿಬಿಸಿಯು ಭಾರತದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯ ಪ್ರಮಾಣಕ್ಕೂ, ಅದು ಘೋಷಿಸಿರುವ ತನ್ನ ಆದಾಯ ಮತ್ತು ಲಾಭಗಳಿಗೆ ಹೊಂದಿಕೆಯಾಗುತ್ತಿಲ್ಲ’ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
‘ಬಿಬಿಸಿ ಆಡಳಿತವು ತಾನು ಮಾಡಿರುವ ಕೆಲ ಪಾವತಿಗಳಿಗೆ ಸಂಬಂಧಿಸಿ ತೆರಿಗೆ ಪಾವತಿಸಿಲ್ಲ. ಈ ಪಾವತಿಗಳು ಭಾರತದಲ್ಲಿನ ತನ್ನ ಆದಾಯ ಎಂಬುದನ್ನು ಸಹ ಬಿಬಿಸಿ ಬಹಿರಂಗಪಡಿಸದಿರುವ ಅಂಶ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂತು’ ಎಂದೂ ಅಧಿಕಾರಿಗಳು ಹೇಳಿದ್ದಾರೆ.