ಉಕ್ರೇನ್: ನೋವಾ ಕಾಖೋವ್ಕಾ ಅಣೆಕಟ್ಟು ಕುಸಿತಗೊಂಡು ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಸುಮಾರು 16 ಜನರು ಸಾವನ್ನಪ್ಪಿದ್ದು, 31 ಮಂದಿ ನಾಪತ್ತೆಯಾಗಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ದಕ್ಷಿಣ ಉಕ್ರೇನ್ನಲ್ಲಿನ ಅಣೆಕಟ್ಟು ಜೂನ್ 6 ರಂದು ಕುಸಿದಿದ್ದು ಇದರಿಂದ ಹಲವು ಹಳ್ಳಿಗಳು ನಾಶಗೊಂಡಿತ್ತು. ಪ್ರವಾಹದಿಂದ ಕೃಷಿ ಭೂಮಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದ್ದು ಇದರಿಂದ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿತ್ತು. ಅಲ್ಲದೆ ವಿದ್ಯುತ್ ಮತ್ತು ಶುದ್ಧ ನೀರಿನ ಪೂರೈಕೆ ಕಡಿತಗೊಂಡು ಜನ ಸಾಮಾನ್ಯರು ಕಂಗಾಲಾಗಿದ್ದರು.
ಅಣೆಕಟ್ಟನ್ನು ಉದ್ದೇಶಪೂರ್ವಕವಾಗಿ ಕೆಡವಲಾಗಿದೆಯೇ ಅಥವಾ ಅದರ ಕುಸಿತದ ಹಿಂದೆ ರಚನಾತ್ಮಕ ವೈಫಲ್ಯವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಕ್ರೇನ್ನ ಆಂತರಿಕ ಸಚಿವಾಲಯವು, ಪ್ರವಾಹ ಪ್ರದೇಶಗಳಿಂದ 3,614 ಜನರನ್ನು, 474 ಮಕ್ಕಳು ಸೇರಿದಂತೆ 80 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಖೇರ್ಸನ್ ಮತ್ತು ಮೈಕೊಲೈವ್ ಪ್ರದೇಶಗಳಲ್ಲಿ 1,300 ಮನೆಗಳು ಜಲಾವೃತವಾಗಿವೆ ಎಂದು ತಿಳಿಸಿದೆ.
‘ದುರದೃಷ್ಟವಶಾತ್, ಸಾವಿನ ಸಂಖ್ಯೆ 29 ಜನರಿಗೆ ಏರಿದೆ. ಒಲೆಶ್ಕಿಯಲ್ಲಿ ಹನ್ನೆರಡು ಜನರು, ಹೋಲಾ ಪ್ರಿಸ್ತಾನ್ನಲ್ಲಿ 13 ಜನರು ಮತ್ತು ನೋವಾ ಕಾಖೋವ್ಕಾದಲ್ಲಿ 4 ಜನರು. ಸಂಬಂಧಿಕರನ್ನು ಕಳೆದುಕೊಂಡಿರುವ ಪ್ರತಿ ಕುಟುಂಬಕ್ಕೆ ನಾವು ಅಗತ್ಯ ನೆರವು ನೀಡುತ್ತೇವೆ’ ಎಂದು ಅಲೆಕ್ಸೆಂಕೊ ಬರೆದುಕೊಂಡಿದ್ದಾರೆ.