ಬಾಗಲಕೋಟೆ: ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ ಹಾಗು ಕ್ಷೇತ್ರಕ್ಕೆ ಬಾರದೆ ಸಚಿವರಿದ್ದಾಗಲೂ ಜನತೆಗೆ ಸಮರ್ಪಕವಾಗಿ ಸಹಕಾರ ನೀಡದ ಕಾರಣ ಕಳೆದ ಬಾರಿ ಸೋಲುಣಬೇಕಾಯಿತೆಂದು ಕಾಂಗ್ರೆಸ್ ಮುಖಂಡ ಶಂಕರ ಸೊರಗಾಂವಿ ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಗಂಭೀರವಾಗಿ ಆರೋಪಿಸಿದರು.
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೈದು ವರ್ಷಗಳಿಂದ ನಂತರ ನೆರೆ ಪ್ರವಾಹ, ಕೋವಿಡ್ ಸೇರಿದಂತೆ ಕಟ್ಟಕಡೆಯ ಜನರ ಸಂಕಷ್ಟಕ್ಕೆ ಬಾರದೆ ಪಕ್ಷವು ಹೀನಾಯ ಸ್ಥಿತಿ ಸಂದರ್ಭದಲ್ಲಿ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಕ್ಷೇತ್ರದ ಜನತೆಗೆ ಸಹಾಯ-ಸಹಕಾರ ಮಾಡುವದರ ಜೊತೆಗೆ ಪಕ್ಷ ಬಲವರ್ಧನೆಗೆ ಸಾಕಷ್ಟು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರಣ ಪಕ್ಷದ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಂಡು ಸ್ಥಳೀಯ ಪ್ರಬಲ ಅಭ್ಯರ್ಥಿಗೆ ಈ ಬಾರಿ ಟಿಕೆಟ್ ನೀಡಿದ್ದಲ್ಲಿ ಗೆಲುವು ನಿರಾಯಾಸವಾಗಲಿದೆ. ಇಲ್ಲವಾದಲ್ಲಿ ಸೋಲು ಕಟ್ಟಿಟ್ಟ ಬುತ್ತಿಯೆಂದು ಸೊರಗಾಂವಿ ತಿಳಿಸಿದರು.
ಪಕ್ಷದ ವರಿಷ್ಠರು ಅಳೆದು-ತೂಗಿ ಅಭ್ಯರ್ಥಿ ಆಯ್ಕೆಯ ಕಸರತ್ತು ನಡೆಸುತ್ತಿದ್ದರೂ ಸಿದ್ರಾಮಯ್ಯನವರಿಂದ ಟಿಕೆಟ್ ದೊರಕುವ ಸಾಧ್ಯತೆಯಿದ್ದು, ಒಬ್ಬರ ಓಲೈಕೆಗಾಗಿ ಕ್ಷೇತ್ರದ ಪ್ರಾಮಾಣಿಕ ಕಾರ್ಯಕರ್ತರ ಕೂಗನ್ನು ತಿರಸ್ಕರಿಸಬೇಡಿಯೆಂದರು.
ಕಳೆದ ವಿಧಾನಸಭೆ ಹಾಗು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಕ್ಷೇತ್ರದಲ್ಲಿ ಸೂಕ್ತ ನಾಯಕತ್ವದ ಕೊರತೆಯಿಂದಲೇ ಸೋಲುನುಬೇಕಾಯಿತು. ಆ ಪ್ರಸಂಗ ಮತ್ತೊಮ್ಮೆ ಬಾರದಂತೆ ನೋಡಿಕೊಳ್ಳಬೇಕಾದರೆ ಸ್ಥಳೀಯ ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಮೂಲಕ ಸ್ಥಳೀಯ ಕಾರ್ಯಕರ್ತರ ನಾಡಿಮಿಡಿತ ಅರಿತು ಮುಂದೆ ಸಾಗಬೇಕಾದ ಜವಾಬ್ದಾರಿ ಹೈಕಮಾಂಡ್ ಮೇಲಿದೆ ಎಂದು ಸೊರಗಾಂವಿ ಹೇಳಿದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ