ಪಾಕಿಸ್ತಾನ: ವಿಶ್ವಸಂಸ್ಥೆಯ ಮಹಿಳಾ ಅಫ್ಘಾನ್ ಉದ್ಯೋಗಿಗಳಿಗೆ ನಂಗರ್ ಹಾರ್ ಪ್ರಾಂತ್ಯದಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡದಂತೆ ತಾಲಿಬಾನ್ ಅಧಿಕಾರಿಗಳು ನಿಷೇಧಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಿಬ್ಬಂದಿ ಇಲ್ಲದೇ ವಿಶ್ವಸಂಸ್ಥೆಯ ಘಟಕಗಳು ಕಾರ್ಯನಿರ್ವಹಿಸಲು ಮತ್ತು ಜೀವ ಉಳಿಸುವ ಕೆಲಸದಲ್ಲಿ ಸಹಾಯ ನೀಡಲು ಸಾಧ್ಯವಿಲ್ಲ ಎಂದು ನಾವು ಅಲ್ಲಿನ ಅಧಿಕಾರಿಗಳಿಗೆ ನೆನಪಿಸಲು ಬಯಸುತ್ತೇವೆ ಎಂದು ವಿಶ್ವ ಸಂಸ್ಥೆ ಟ್ವೀಟ್ ಮೂಲಕ ತಿಳಿಸಿದೆ.
ವಿಶ್ವ ಸಂಸ್ಥೆ ಮಾಡಿರುವ ಟ್ವೀಟ್ ಗೆ ತಾಲಿಬಾನ್ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಂಗರ್ಹಾರ್ ಪ್ರಾಂತ್ಯದ ಆಚೆಗೆ ನಿಷೇಧವನ್ನು ವಿಸ್ತರಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅಫಘಾನಿಸ್ತಾನದಿಂದ ಅಮೆರಿಕದ ಪಡೆಗಳು ಹಿಂದೆ ಸರಿಯುತ್ತಿದ್ದಂತೆ ತಾಲಿಬಾನ್ ಅಫ್ಘಾನಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ಬಳಿಕ ದೇಶದಲ್ಲಿ ಕಠಿಣ ನಿಯಮಗಳನ್ನು ಹೇರಿದೆ.
ಮಾನವೀಯ ನೆರವಿಗಾಗಿ ವಿಶ್ವಸಂಸ್ಥೆ ಮಾಡುತ್ತಿರುವ ಕೆಲಸದಲ್ಲಿ ಮಹಿಳೆಯರನ್ನ ನಿಷೇಧ ಹೇರಿರಲಿಲ್ಲ. ಆದರೆ ವಿಶ್ವಸಂಸ್ಥೆಗಾಗಿ ಕೆಲಸ ಮಾಡುವ ಮಹಿಳೆಯರನ್ನು ಗುರಿಯಾಗಿಸಬಹುದು ಎಂಬ ಭಯವನ್ನು ವಿಶ್ವಸಂಸ್ಥೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್, ಅಂತಹ ಯಾವುದೇ ನಿಷೇಧವು ಸ್ವೀಕಾರಾರ್ಹವಲ್ಲ ಎಂದು ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.