ವಿಶ್ವಸಂಸ್ಥೆ: ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣವನ್ನು ‘ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಉಂಟಾಗಿರುವ ಅವಮಾನ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ತುರ್ತು ಅಧಿವೇಶನದಲ್ಲಿ ಮಾತನಾಡಿದ ಅವರು, ‘ಆಕ್ರಮಣವು ವಿಶ್ವಸಂಸ್ಥೆಯ ಸನ್ನದನ್ನು ಉಲ್ಲಂಘಿಸುತ್ತದೆ ಹಾಗೂ ಬಹುಪಕ್ಷೀಯ ವ್ಯವಸ್ಥೆಯ ಮೂಲಾಧಾರ ತತ್ವಗಳು ಮತ್ತು ಮೌಲ್ಯಗಳಿಗೆ ಸವಾಲು ಹಾಕುತ್ತದೆ’ ಎಂದಿದ್ದಾರೆ.
‘ಉಕ್ರೇನ್‌ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತವಾದ ಶಾಂತಿಯ ಅಗತ್ಯವನ್ನು ಒತ್ತಿಹೇಳುವ ನಿರ್ಣಯವನ್ನು ಸಾಮಾನ್ಯ ಸಭೆಯು ಅಂಗೀಕರಿಸಲು ಸಿದ್ಧವಾಗಿದೆ’ ಎಂದರು.