ಬೆಂಗಳೂರು:- ರಾಜಧಾನಿ ಬೆಂಗಳೂರಿನ ಪ್ರತಿಷ್ಟಿತ ಏರಿಯಾದಲ್ಲಿ ಅನಧಿಕೃತ ಆಸ್ಪತ್ರೆ ಕಟ್ಟಡ ತಲೆ ಎತ್ತಿದ್ದು, ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ.
ಇರುವ ನಿಯಮಗಳನ್ನೆಲ್ಲ ಉಲ್ಲಂಘಿಸಿ ಕಟ್ಟಡ ತಲೆ ಎತ್ತುತ್ತಿದ್ದರೆ, ಮತ್ತೊಂದೆಡೆ ರೆಸಿಡೆನ್ಸಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ಕಟ್ಟಡ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ.
ಸತತ ನಾಲ್ಕು ವರ್ಷಗಳಿಂದ ಇಲ್ಲಿನ ಜನರು ಕಟ್ಟಡ ನಿರ್ಮಾಣ ಬೇಡ ಎಂದು ಹೋರಾಟ ನಡೆಸ್ತಿದ್ದರೂ ಕೂಡ ಪಾಲಿಕೆ ಮೌನವಾಗಿರುವುದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.
ಇತ್ತೀಚೆಗಷ್ಟೇ ಬಾಬುಸ್ ಪಾಳ್ಯದ ಅನಧಿಕೃತ ಕಟ್ಟಡ ಕುಸಿದು 9 ಜನ ಕಾರ್ಮಿಕರು ಬಲಿಯಾಗಿದ್ದರು. ಇದಾದ ಬಳಿಕ ರಾಜಧಾನಿಯ ಅನಧಿಕೃತ ಕಟ್ಟಡಗಳ ಬಗ್ಗೆ ಸರ್ವೇ ಮಾಡಿ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿಗೆ ಖಡಕ್ ಸೂಚನೆ ನೀಡಿದ್ದರು. ಆದರೆ, ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಾಲಿಕೆ ಬೊಬ್ಬೆಹಾಕಿದರೂ ರಾಜಧಾನಿಯ ಅನಧಿಕೃತ ಕಟ್ಟಡಗಳಿಗೆ ಮಾತ್ರ ಕಡಿವಾಣ ಬಿದ್ದಿಲ್ಲ.
ಕಮ್ಮನಹಳ್ಳಿಯ ರಾಮಸ್ವಾಮಿಪಾಳ್ಯದಲ್ಲಿಅನಧಿಕೃತ ಆಸ್ಪತ್ರೆ ಕಟ್ಟಡ ತಲೆ ಎತ್ತುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಡರೂ ಕಾಣದಂತಿದ್ದಾರೆ. 15 ಅಡಿ ಚಿಕ್ಕ ರಸ್ತೆಯಲ್ಲಿ ಕಟ್ಟಡ ನಿರ್ಮಿಸಲಾಗ್ತಿದ್ದು, ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಅವರು ಹೋರಾಟಕ್ಕಿಳಿದಿದ್ದಾರೆ.