ಬೆಂಗಳೂರು:- ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ ಹೆಚ್ಎಂಟಿ ಲೇಔಟ್ನಲ್ಲಿ ನಡೆದಿದೆ.
ಎಸ್ ಎನ್ ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕ ಮನೋಹರ್ ಎಂಬುವವರ ಮನೆಯಲ್ಲಿ ದರೋಡೆ ನಡೆದಿದೆ. ಘಟನೆ ವೇಳೆ ಉದ್ಯಮಿ ಪುತ್ರ ರೂಪೇಶ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ 7.30ರ ಸುಮಾರಿಗೆ, ಮನೆಯಲ್ಲಿ ಉದ್ಯಮಿ ಮನೋಹರ್ ಅವರು ಇಲ್ಲದ ಸಮಯದಲ್ಲಿ 5 ರಿಂದ 6 ಮಂದಿ ದುಷ್ಕರ್ಮಿಗಳು ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿ ಕೇವಲ ಮನೋಹರ್ ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಉದ್ಯಮಿ ಮನೋಹರ್ ರವರ ಅಣ್ಣ ತಮ್ಮಂದಿರ ನಡುವೆ ಹಲವು ವಿಚಾರಗಳಲ್ಲಿ ಕಲಹವಿದೆ. ಹೀಗಾಗಿ ಅದೇ ವಿಚಾರಕ್ಕೆ ಪೊಲೀಸರು ಬಂದಿರುವುದಾಗಿ ರೂಪೇಶ್ ಅಂದುಕೊಂಡಿದ್ದಾರೆ. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಶದಲ್ಲಿ ಬಂದಿದ್ದ ಖದೀಮರು ಏಕಾಏಕಿ ಡ್ರಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ. ನಂತರ ರೂಪೇಶ್ ಮೇಲೆ ಹಲ್ಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ನಗದು ಲೂಟಿ ಮಾಡಿದ್ದಾರೆ.
700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗುದು ದರೋಡೆ ಮಾಡಿ ಕೃತ್ಯದ ಬಳಿಕ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಎಸ್ಕೇಪ್ ಆಗಿದ್ದಾರೆ. ಉದ್ಯಮಿ ಪುತ್ರ ರೂಪೇಶ್ಗೆ ಘಟನೆ ವೇಳೆ ಸಣ್ಣ ಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.