ಅಂಕಾರ: ಕತಾರ್ ದೊರೆ ಇಸ್ರೇಲ್ ಸೇನೆಯ ವಿರುದ್ಧ ಗುಡುಗಿ, ಎಚ್ಚರಿಕೆ ರವಾನಿಸಿದ ಬೆನ್ನಿಗೇ ಟರ್ಕಿ ಅಧ್ಯಕ್ಷ ರೆಸಿಪ್ ಎರ್ಡೊಗನ್ ಕೂಡ ಇಸ್ರೇಲ್ ವಿರುದ್ಧ ಗುಟುರು ಹಾಕಿದ್ದಾರೆ. ”ಉಗ್ರ ಸಂಘಟನೆಯಂತೆ ಇಸ್ರೇಲ್ ಸೇನೆಯು ವರ್ತಿಸುತ್ತಿದೆ. ಆತ್ಮರಕ್ಷಣೆ ನೆಪವೊಡ್ಡಿ ಮಾನವೀಯತೆ ಮರೆತು ಕ್ರೌರ್ಯದಲ್ಲಿ ಮುಳುಗಿದೆ. ಹಮಾಸ್ ಸಂಘಟನೆಯು ಉಗ್ರರ ಪಡೆಯಲ್ಲ, ಅದೊಂದು ದೇಶಭಕ್ತರ ಪಡೆ. ಅವರು ತಮ್ಮ ನೆಲ, ಜನರನ್ನು ರಕ್ಷಿಸಿಕೊಳ್ಳುತ್ತಿದ್ದಾರೆ,” ಎಂದು ಎರ್ಡೊಗನ್ ಟರ್ಕಿ ಸಂಸತ್ ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ಇದೇ ವೇಳೆ ಅವರು, ತಾವು ಇಸ್ರೇಲ್ಗೆ ಭೇಟಿ ನೀಡಲು ಕೈಗೊಂಡಿದ್ದ ತೀರ್ಮಾನದಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಪ್ಯಾಲೆಸ್ತೀನಿನಲ್ಲಿನ ಇಸ್ಲಾಮಿಕ್ ಜಿಹಾದಿಗಳು ಒಂದೆಡೆ ಸಭೆ ನಡೆಸಿ, ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಹತ್ತಿಕ್ಕಲು ರಣತಂತ್ರ ಹೆಣೆದಿದ್ದಾರೆ ಎಂದು ಸುದ್ದಿಸಂಸ್ಥೆ ರಾಯ್ಟರ್ಸ್ ವರದಿ ಮಾಡಿದೆ. ಲೆಬನಾನ್ನಲ್ಲಿರುವ ಇರಾನ್ ಬೆಂಬಲಿತ , ಭಾರಿ ಶಸ್ತ್ರಾಸ್ತ್ರ ಉಗ್ರರ ಪಡೆ ‘ಹೆಜ್ಬೊಲ್ಲಾ’ದ ಮುಖ್ಯಸ್ಥ ಹಸನ್ ನಸ್ರಲ್ಲಾ ಹಾಗೂ ಹಮಾಸ್,
ಉಗ್ರರ ನಾಯಕ ಸಲೇಹ್ ಅಲ್-ಅರೌರಿ ಮತ್ತು ಐಸಿಸ್ ಮುಖಂಡ ಜಿಯಾದ್ ಅಲ್-ನಖ್ಲೇಹ್ ಸಭೆ ನಡೆಸಿದ್ದಾರೆ. ಗಾಜಾ ಹಾಗೂ ಪ್ಯಾಲೆಸ್ತೀನ್ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನಾಪಡೆ ಮತ್ತು ಅವರ ಬೆಂಬಲಿಗರನ್ನು ಸೋಲಿಸಲು ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಗಾಜಾ ಪಟ್ಟಿಯನ್ನು ಪುನಃ ತನ್ನ ಸುಪರ್ದಿಗೆ ಪಡೆಯಲು ಹಮಾಸ್ಗೆ ಎಲ್ಲಾ ರೀತಿಯ ಬೆಂಬಲದ ಭರವಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.