ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ಗುರುತು ಸಿಗದ ಮೃತದೇಹಗಳು ಪತ್ತೆಯಾಗುತ್ತಿವೆ. ಹಂತಕರ ಪತ್ತೆಗೂ ಮುನ್ನ ಹತ್ಯೆಯಾದವರ ಗುರುತು ಪತ್ತೆಹಚ್ಚುವುದೇ ಸವಾಲಾಗಿದ್ದು ಈಗ ಪೀಣ್ಯ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ.
ಇಂದು ಬೆಳಗ್ಗೆ ಸುಮಾರು 6 ಗಂಟೆ ಸಮಯ, ಬೆಂಗಳೂರಿನ ಚಿಕ್ಕ ಬಿದರಕಲ್ಲು ಸಮೀಪದ ಚನ್ನನಾಯಕನಪಾಳ್ಯದ ಕೆಲವು ಜನ ನಿದ್ದೆಯಿಂದೆದ್ದು ವಾಕಿಂಗ್ ಅಂತ ಹೋಗಿದ್ರು. ಅಲ್ಲಿನ ಚನ್ನನಾಯಕನಪಾಳ್ಯ ಬಯಲು ಎಂದೇ ಕರೆಯಲ್ಪಡುವ ಸ್ಥಳದಲ್ಲಿ ಗಿಡಗಳ ಬಳಿ ಬೆಂಕಿ ಉರಿಯುತ್ತಿದ್ದು, ಹೊಗೆಯಾಡುತ್ತಿತ್ತು. ಏನೋ ಹೋಗೆಯಾಡ್ತಿದೆಯಲ್ಲಾ ಅಂತ ಹತ್ತಿರ ಹೋಗಿ ನೋಡಿದ್ರೆ ನಿಗಿ-ನಿಗಿ ಕೆಂಡದಲ್ಲಿ, ಕಸದ ರಾಶಿಯ ಮೇಲಿನ ಬೆಂಕಿಯಲ್ಲಿ ವ್ಯಕ್ತಿಯೊಬ್ಬನ ಶವ ಸುಡುತ್ತಾ ಇತ್ತು.ಕೂಡಲೇ ಗಾಬರಿಗೊಂಡ ಸ್ಥಳೀಯರು ಪೀಣ್ಯಾ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಪೀಣ್ಯ ಪೊಲೀಸ್ರು ಬೆಂಕಿ ನಂದಿಸಿ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು. ಅಷ್ಟರಲ್ಲಿ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಸಿಗುತ್ತ ಅಂತ ಸ್ಥಳೀಯರನ್ನ ವಿಚಾರಸಿದ್ರೆ ಮೃತನ ಗುರುತನ್ನ ಯಾರು ಹೇಳಲಿಲ್ಲ. ಹೀಗಾಗಿ ವ್ಯಕ್ತಿಯನ್ನ ಯಾರೋ ಬೇರೆ ಕಡೆ ಕೊಲೆಗೈದು ಇಲ್ಲಿ ಸುಟ್ಟಾಕಿರಬಹುದೆಂಬ ಅನುಮಾನ ಶುರುವಾಗಿತ್ತು.
ಇನ್ನು ಸ್ಥಳದಲ್ಲಿ ಹಂತಕರ ಬಗ್ಗೆ ಯಾವುದಾದ್ರೂ ಸುಳಿವು ಎಂದು ಸೀನ್ ಆಫ್ ಕ್ರೈಂ ಆಫೀಸರ್ಸ್ ಹಾಗೂ ಎಫ್ ಎಸ್ಎಲ್ ತಜ್ಞರನ್ನ ಕರೆಸಿಕೊಂಡ ಪೊಲೀಸರು ತಪಾಸಣೆ ನಡೆಸಿದ್ರು. ಎಫ್ಎಸ್ಎಲ್ ತಜ್ಞರು ಕೆಲ ಸ್ಯಾಂಪಲ್ಸ್ ಗಳನ್ನ ಪಡೆದು ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇನ್ನು ಶವದ ಸಮೀಪದಲ್ಲೇ ಕೆಲ ಬಿಯರ್ ಬಾಟಲ್ ಗಳು ಪತ್ತೆಯಾಗಿದ್ದು, ವ್ಯಕ್ತಿಯ ಹತ್ಯೆಗೂ ಮುನ್ನಎಣ್ಣೆ ಪಾರ್ಟಿ ಮಾಡಿ ಆ ಬಳಿಕ ಹತ್ಯೆಗೈದಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೀಣ್ಯ ಪೊಲೀಸ್ರು, ಮೊದಲಿಗೆ ಮೃತನ ಗುರುತು ಪತ್ತೆಹಚ್ಚಿ ಆ ಆಧಾರದ ಮೇಲೆ ಹಂತಕರ ಪತ್ತೆಗೆ ತನಿಖೆ ಮುಂದಾಗಲಿದ್ದಾರೆ.