ಇವತ್ತು ವೃತ್ತಿಪರ ಮಹಿಳೆಯರಷ್ಟೇ ಅಲ್ಲ ಕೆಲಸಕ್ಕೆ ಹೋಗುವ ಎಲ್ಲಾ ವರ್ಗದ ಮಹಿಳೆಯರೂ ಬಹಳ ಕೌಟುಂಬಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮನೆ ಹಾಗು ಕೆಲಸ ಎರಡನ್ನೂ ಸಂಭಾಳಿಸುವ ಭಾರತ ಮಹಿಳೆಯ ಹೆಗಲಿಗೇ ಹೆಚ್ಚು ಬಿದ್ದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಲಸದಲ್ಲಿರುವ ಮಹಿಳೆಯರು ಸರ್ಕಾರದಿಂದಲಾದರೂ ನೆರವು ಸಿಗಬಹುದು ಎಂಬ ಸಹಜ ನಿರೀಕ್ಷೆಯಲ್ಲಿದ್ದಾರೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪೂರ್ಣವಾಗಿ ಸಬಲರಾಗಿಲ್ಲ. ಉದ್ಯೋಗಸ್ಥಳದಲ್ಲೂ ಪುರುಷರಿಗೆ ಸಿಗುವಷ್ಟು ವೇತನ ಮಹಿಳೆಯರಿಗೆ ಸಿಗುವುದಿಲ್ಲ. ಈ ವೇತನ ತಾರತಮ್ಯ ಸೇರಿದಂತೆ ಹಲವು ಸಮಸ್ಯೆಗಳು ಮಹಿಳೆಯರನ್ನು ಕಟ್ಟಿಹಾಕಿರುವುದು ಹೌದು. ಈ ಬಾರಿಯ ಬಜೆಟ್ನಲ್ಲಿ ಈ ಸಮಸ್ಯೆಗಳ ಕಡೆ ಗಮನ ಹರಿಸಬಹುದು ಎನ್ನುವ ನಿರೀಕ್ಷೆ ಮಹಿಳಾ ಸಮುದಾಯದ್ದಾಗಿದೆ.
2021-22ರಲ್ಲಿ ಒಟ್ಟೂ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ಶೇ 32.8ರಷ್ಟಿತ್ತು. 2022-23ರಲ್ಲಿ ಇದು ಶೇ. 37ಕ್ಕೆ ಹೆಚ್ಚಿದೆ. ಭಾರತ ಶೇ. 8ಕ್ಕಿಂತ ಹೆಚ್ಚಿನ ವೇಗದಲ್ಲಿ ಜಿಡಿಪಿ ವೃದ್ಧಿ ಕಾಣಬೇಕಾದರೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ. 50ಕ್ಕೆ ಏರಬೇಕು ಎನ್ನುವ ಅಭಿಪ್ರಾಯ ಇದೆ. ಆ ನಿಟ್ಟಿನಲ್ಲಿ ಬಜೆಟ್ ಗಮನ ಹರಿಸುತ್ತಾ ನೋಡಬೇಕು.
ಬಜೆಟ್ 2024, ಮಹಿಳೆಯರ ನಿರೀಕ್ಷೆಗಳು
- ಎಲ್ಲಾ ಉದ್ಯೋಗಿಗಳಿಗೂ ಲಿಂಗ ತಾರತಮ್ಯ ಇಲ್ಲದೇ ಸಮಾನ ಹುದ್ದೆ ಸಮಾನ ವೇತನ ರೀತಿಯ ನೀತಿ ಜಾರಿ ಮಾಡಲಿ.
- ಮಹಿಳೆಯರಿಗೆ ಸ್ವಂತ ಉದ್ಯೋಗ ಸ್ಥಾಪಿಸಲು ಸಾಲ ಮೊದಲಾದ ನೆರವನ್ನು ಇನ್ನಷ್ಟು ಹೆಚ್ಚಿಸಲಿ
- ಮಹಿಳೆಯರಿಗೆ ಉದ್ಯೋಗ ಸಿಗಲು ಅವಕಾಶ ಹೆಚ್ಚಳವಾಗುವ ನಿಟ್ಟಿನಲ್ಲಿ ಅವರ ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಸ್ಕೀಮ್ಗಳಿರಲಿ.
ಕೆಲಸಕ್ಕೆ ಹೋಗುವ ಮಹಿಳೆಯರಿಗೆ ರಜಾ ದಿನಗಳ ಸಂಖ್ಯೆ ಹೆಚ್ಚಳ, ಕಡ್ಡಾಯ ಹೆರಿಗೆ ರಜೆ ಇತ್ಯಾದಿ ಸೌಲಭ್ಯಗಳನ್ನು ಬಜೆಟ್ನಲ್ಲಿ ನೀಡಲಿ. ಹಾಗೆಯೇ, ಯುವ ಮಹಿಳೆಯರ ಕೌಶಲ್ಯ ಅಭಿವೃದ್ಧಿಗೆ ತರಬೇತಿ, ಉದ್ದಿಮೆದಾರರಿಗೆ ತೆರಿಗೆ ರಿಯಾಯಿತಿ ಇತ್ಯಾದಿ ಸವಲತ್ತುಗಳು ಸಿಗಲಿ ಎಂಬ ಕೂಗು ಕೇಳಿಬರುತ್ತಿದೆ. ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಉದ್ಯೋಗಸ್ಥೆಯರು ಮತ್ತು ಮಹಿಳಾ ಉದ್ದಿಮೆದಾರರಿಗೆ ಬಜೆಟ್ ನಿರೀಕ್ಷೆಗಳು
- ಹನ್ನೆರಡನೇ ತರಗತಿ ಬಳಿಕ ಯುವ ಮಹಿಳೆಯರಿಗೆ ಕೌಶಲ್ಯ ತರಬೇತಿ ಒದಗಿಸುವ ಕಾರ್ಯಕ್ಕೆ ಒತ್ತು ಕೊಡಬೇಕು.
- ಮಹಿಳಾ ಸ್ವಸಹಾಯ ಸಂಘಗಳು ಹೆಚ್ಚು ಬಲಯುತವಾಗಿ ಬೆಳೆಯಲು ಇನ್ನಷ್ಟು ಶಕ್ತಿ ತುಂಬಬೇಕು.
- 50ಕ್ಕೂ ಹೆಚ್ಚು ಉದ್ಯೋಗಿಗಳಿರುವ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಆರು ತಿಂಗಳು ಹೆರಿಗೆ ರಜೆ ನೀಡಬೇಕು.
- ಮಹಿಳಾ ಉದ್ಯೋಗಿಗಳಿಗೆ ಪಾವತಿ ರಜೆಯ ಸಂಖ್ಯೆ ಹೆಚ್ಚಿಸಬೇಕು
- ಸಣ್ಣ ಕಂಪನಿಗಳಿಗೆ ಹೆರಿಗೆ ರಜೆ ವಿಚಾರವಾಗಿ ಸರ್ಕಾರ ನೆರವು ಒದಗಿಸಬೇಕು.
- ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯ ಭತ್ಯೆಯನ್ನು ಹೆಚ್ಚಿಸಬೇಕು.