ನವದೆಹಲಿ:- ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಮಹತ್ವದ ಕ್ರಮವಾದ “ಒಂದು ರಾಷ್ಟ್ರ, ಒಂದು ಚುನಾವಣೆ” ಮಸೂದೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆಗೆ ಒಪ್ಪಿಗೆ ನೀಡಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಇದರ ಉದ್ದೇಶವಾಗಿದೆ. ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು.
ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಂಗೀಕರಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವಂತೆ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿದೆ.
ಇನ್ನೂ ಸಂಸತ್ನಲ್ಲಿ ಮಂಡನೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಒಂದಷ್ಟು ಸವಾಲುಗಳು ಎದುರಾಗಲಿವೆ. ಕೋವಿಂದ್ ಸಮಿತಿ ನೀಡಿರುವ ಶಿಫಾರಸು ಕಾರ್ಯಗತಗೊಳಿಸುವುದು ಅಷ್ಟು ಸುಲಭವಿಲ್ಲ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಅಲ್ಲದೇ ರಾಜಕೀಯ ಒಮ್ಮತವೂ ಅಗತ್ಯವಾಗಿದೆ.
ಇನ್ನೂ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಹಲವು ಸವಾಲುಗಳು ಇವೆ. ಇದು ಪ್ರಜಾಪ್ರಭುತ್ವವನ್ನೇ ದುರ್ಬಲಗೊಳಿಸಬಹುದು ಅನ್ನೋದು ಹಲವರ ಅಭಿಪ್ರಾಯ. ಭಾರತಂಥ ಬೃಹತ್ ಜನಸಂಖ್ಯೆಯುಳ್ಳ ದೇಶಕ್ಕೆ ಇದು ಕಾರ್ಯಸಾಧುವಲ್ಲ ಎಂದು ವಿಪಕ್ಷಗಳು ಹೇಳಿವೆ. ರಾಜಕೀಯ ಕಾರಣಗಳಿಂದ ವಿಧಾನಸಭೆಯನ್ನು ವಿಸರ್ಜಿಸಿದರೂ ಮುಂದಿನ ಅವಧಿಯವರೆಗೆ ಚುನಾವಣೆಗೆ ಕಾಯಬೇಕಾದ ಪ್ರಸಂಗ ಬರಲಿದೆ. ಇದರಿಂದ ಒಕ್ಕೂಟದ ವ್ಯವಸ್ಥೆಗೆ ಪೆಟ್ಟು ಬೀಳಲಿದೆ ಅನ್ನೋದು ವಿಪಕ್ಷಗಳ ವಾದವಾಗಿದೆ.