ನವದೆಹಲಿ: ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ರಾಜ್ಯದಲ್ಲಿ 45-60 ವಯೋಮಾನದ ಅವಿವಾಹಿತರಿಗೆ ಶೀಘ್ರದಲ್ಲೇ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಮುಂದಿನ ಆರು ತಿಂಗಳೊಳಗೆ ರಾಜ್ಯದಲ್ಲಿ ವೃದ್ಧ ಪಿಂಚಣಿಯನ್ನು ತಿಂಗಳಿಗೆ 3000 ರೂ.ಗೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಒಂದು ತಿಂಗಳೊಳಗೆ ನಿರ್ಧಾರ
ಒಂದು ತಿಂಗಳೊಳಗೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್ನ ಕಲಾಂಪುರ ಗ್ರಾಮದಲ್ಲಿ ನಡೆದ ‘ಜನಸಂವಾದ’ ಕಾರ್ಯಕ್ರಮದಲ್ಲಿ ಹೇಳಿದರು. ‘ಜನ ಸಂವಾದ’ ಸಂದರ್ಭದಲ್ಲಿ 60 ವರ್ಷದ ಅವಿವಾಹಿತ ವ್ಯಕ್ತಿಯ ಪಿಂಚಣಿ ಸಂಬಂಧಿತ ದೂರಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸರ್ಕಾರವು ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಿದರು.
ಕರ್ನಲ್ ಜಿಲ್ಲೆಗೆ ಇಂಟರ್ನೆಟ್ ಸೌಲಭ್ಯ
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವಂತೆ ಕರ್ನಾಲ್ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ಸೂಚಿಸಿದರು. ಇಂದಿನ ಕಾಲದಲ್ಲಿ ಶೇ.70ರಿಂದ ಶೇ.80ರಷ್ಟು ಕೆಲಸಗಳು ಆನ್ಲೈನ್ನಲ್ಲಿ ನಡೆಯುತ್ತಿದ್ದು, ಅದಕ್ಕಾಗಿಯೇ ಹಳ್ಳಿಗಳಲ್ಲಿ ಇಂಟರ್ನೆಟ್ ಸೇವೆ ಅಗತ್ಯವಾಗಿದೆ. ಪ್ರತಿ ಹಳ್ಳಿಯಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಸೇವೆ ಲಭ್ಯವಾಗುವ ಮೊದಲು ಕರ್ನಾಲ್ ಜಿಲ್ಲೆಗೆ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.