ನವದೆಹಲಿ: ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ (Rahul Gandhi) ಸೆಂಟ್ರಲ್ ದೆಹಲಿಯಲ್ಲಿರುವ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸಹೋದರಿ, ಕಾಂಗ್ರೆಸ್ (Congress) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು ಶುಕ್ರವಾರ ಬೆಳಗ್ಗೆ ಎರಡು ಭಾರಿ ಈ ಬಂಗ್ಲೆಗೆ ಭೇಟಿ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಇಂದು ಮೂರು ಗಂಟೆಗೆ ಬಂಗ್ಲೆಯ ಕೀ ಹಸ್ತಾಂತರಿಸುವ ಸಾಧ್ಯತೆ ಇದೆ. 12 ತುಘ್ಲಕ್ ಲೇನ್ನಲ್ಲಿರುವ ಬಂಗ್ಲೆಯನ್ನು ಏಪ್ರಿಲ್ 22ರೊಳಗೆ ಖಾಲಿ ಮಾಡಬೇಕು ಎಂದು ಲೋಕಸಭಾ ಹೌಸಿಂಗ್ ಕಮಿಟಿಯ ಅಧ್ಯಕ್ಷ ಬಿಜೆಪಿ ಸಂಸದ ಸಿಆರ್ ಪಾಟೀಲ್ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. 2005ರಿಂದ ರಾಹುಲ್ ಇಲ್ಲಿ ವಾಸವಾಗಿದ್ದಾರೆ. ಪ್ರೋಟೊಕಾಲ್ ಪ್ರಕಾರ ರಾಹುಲ್ ಈ ವಸತಿ ತೊರೆಯಬೇಕಿದೆ. ಆದಾಗ್ಯೂ ಇದು ಕೇಂದ್ರ ಸರ್ಕಾರದ ರಾಜಕೀಯ ಹಗೆತನ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.
ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಮತ್ತು ಅವರ ಅಧಿಕೃತ ನಿವಾಸವನ್ನು ಖಾಲಿ ಮಾಡಲು ಒಂದು ತಿಂಗಳ ಅವಧಿಯನ್ನು ಪಡೆಯುತ್ತಾರೆ. ಮೇಲ್ಮನವಿ ಸಲ್ಲಿಸಲು ಗುಜರಾತ್ ನ್ಯಾಯಾಲಯ 30 ದಿನಗಳ ಕಾಲಾವಕಾಶ ನೀಡಿತ್ತು. ಈ ಮನವಿಗೆ ಶುಕ್ರವಾರ ಹಿನ್ನಡೆಯಾಗಿದೆ. ಇದರರ್ಥ ರಾಹುಲ್ ಗಾಂಧಿ ಅವರು ಸಂಸದರಾಗಿ ಮುಂದುವರಿಯಲು ಸಾಧ್ಯವಿಲ್ಲ, ಬಿಜೆಪಿ ಕೆಳ ನ್ಯಾಯಾಲಯದ ಶಿಕ್ಷೆಯನ್ನು ಎತ್ತಿಹಿಡಿಯುವ ಮೇಲ್ಮನವಿ ನ್ಯಾಯಾಲಯದ ತೀರ್ಪನ್ನು “ಗಾಂಧಿ ಕುಟುಂಬಕ್ಕೆ ಕಪಾಳಮೋಕ್ಷ” ಎಂದು ಕರೆದಿದೆ. ಕಾನೂನು ಎಲ್ಲರಿಗೂ ಸಮಾನವಾಗಿದೆ ಎಂದು ನ್ಯಾಯಾಲಯವು ಸಾಬೀತುಪಡಿಸಿದೆ. ಯಾವುದೇ ಕುಟುಂಬಕ್ಕೆಆದ್ಯತೆ ನೀಡಲಾಗುವುದಿಲ್ಲ” ಎಂದು ಹೇಳಿದೆ.