ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಆರ್ ಚಂದ್ರು ನಿರ್ದೇಶಕ ಪ್ಯಾನ್ ಇಂಡಿಯಾ ಕಬ್ಜ ಚಿತ್ರ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಮಾರ್ಚ್ 17 ರಂದು ಭರ್ಜರಿಯಾಗಿ ತೆರೆಕಂಡಿದೆ. ಸಿನಿಮಾ ಬಿಡುಗಡೆ ಆದ ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡುವ ಮೂಲಕ ‘ಕಬ್ಜ’ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಬಹು ತಾರಾಗಣದ ‘ಕಬ್ಜ’ ಸಿನಿಮಾವನ್ನು ತೆರೆ ಮೇಲೆ ನೋಡಿದ ಸಿನಿ ರಸಿಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ನಿರ್ದೇಶಖ ಆರ್ ಚಂದ್ರು ಅವರ ಮೂರು ವರ್ಷಗಳ ಪರಿಶ್ರಮವನ್ನು ತೆರೆ ಮೇಲೆ ಕಂಡ ಪ್ರೇಕ್ಷಕರು ಚಂದ್ರು ಕೆಲಸಕ್ಕೆ ಶಹಭಾಷ್ ಅಂತಿದ್ದಾರೆ. ಕಬ್ಜ ಚಿತ್ರದ ಮೇಕಿಂಗ್, ಕಥೆ, ಛಾಯಾಗ್ರಹಣ, ಬ್ಯಾಕ್ಗ್ರೌಂಡ್ ಮ್ಯೂಸಿಕ್ ಹಾಗೂ ತಾರೆಯರ ನಟನೆಗೆ ಫುಲ್ ಮಾರ್ಕ್ಸ್ ನೀಡುತ್ತಿರುವ ಚಿತ್ರ ಪ್ರೇಮಿಗಳು ಕನ್ನಡ ಚಿತ್ರರಂಗದಿಂದ ಮತ್ತೊಂದು ಅದ್ಭುತ ಚಿತ್ರ ಎಂದು ಕಬ್ಜ ಚಿತ್ರವನ್ನು ಕೊಂಡಾಡುತ್ತಿದ್ದಾರೆ.
‘ಕಬ್ಜ’ ಸಿನಿಮಾ ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಚಿತ್ರದ ಒಟ್ಟಾರೆ ಕಲೆಕ್ಷನ್ 100 ಕೋಟಿ ರೂಪಾಯಿ ದಾಟಿದೆ ಎಂಬ ಲೆಕ್ಕಾಚಾರ ಕೇಳಿ ಬಂದಿದೆ. ಈ ಚಿತ್ರದಿಂದ ನಿರ್ಮಾಪಕ ಹಾಗೂ ನಿರ್ದೇಶಕ ಆರ್. ಚಂದ್ರು ಅವರ ಜೇಬು ತುಂಬಿದ್ದು, ಚಿತ್ರದ ಟಿವಿ ಹಾಗೂ ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಈಗ ಚಿತ್ರದ ಕಲೆಕ್ಷನ್ ಕೂಡ ಜೋರಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ವಿವಿಧ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಉತ್ತಮ ಗಳಿಕೆ ಮಾಡಿದ್ದು, ಈ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಯಶ್ ನಟನೆಯ ‘ಕೆಜಿಎಫ್ 2’, ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’, ಹಾಗೂ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾಗಳು ಅಬ್ಬರದ ಕಲೆಕ್ಷನ್ ಮಾಡಿದ್ದವು. ಈ ಚಿತ್ರಗಳಿಂದ ಕನ್ನಡ ಸಿನಿಮಾ ಹಿರಿಮೆ ಹೆಚ್ಚಾಗಿದೆ. ಈಗ ‘ಕಬ್ಜ’ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಶುಕ್ರವಾರ ತೆರೆಕಂಡ ಕಬ್ಜ ಎರಡೇ ದಿನದಲ್ಲಿ 100 ಕೋಟಿ ಕಲೆಕ್ಷನ್. ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಹಲವು ಥಿಯೇಟರ್ಗಳಲ್ಲಿ ‘ಕಬ್ಜ’ ತೆರೆಕಂಡಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿದೆ. ಕರ್ನಾಟಕವೊಂದರಲ್ಲೇ ಈ ಚಿತ್ರ 20 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಭಾಷೆಯಿಂದ ಚಿತ್ರಕ್ಕೆ 12 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ಭಾಷೆಯಿಂದ 7 ಕೋಟಿ ರೂಪಾಯಿ, ತಮಿಳಿನಿಂದ 5 ಕೋಟಿ ರೂಪಾಯಿ, ಮಲಯಾಳಂನಿಂದ 3 ಕೋಟಿ ರೂಪಾಯಿ ಹಾಗೂ ವಿದೇಶದಿಂದ 8 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಮೊದಲ ದಿನದ ಗಳಿಕೆ 55 ಕೋಟಿ ರೂಪಾಯಿ ಆಸುಪಾಸಿನಲ್ಲಿದ್ದು ಎರಡನೇ ದಿನಕ್ಕೆ 100 ಕೋಟಿಯಾಗಿದೆ. ಈ ಮೂಲಕ ಕಬ್ಜ ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ.
ಇಂದು (ಮಾರ್ಚ್ 19) ವೀಕೆಂಡ್ ಇರುವುದರಿಂದ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಹೀಗಾಗಿ, ಸಿನಿಮಾ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎನ್ನಲಾಗುತ್ತಿದೆ. ಮುಂದಿನ ಬುಧವಾರ (ಮಾರ್ಚ್ 22) ಯುಗಾದಿ ಹಬ್ಬ ಇದ್ದು, ಆ ಪ್ರಯುಕ್ತ ಸರ್ಕಾರಿ ರಜೆ ಇದೆ. ಅದು ಕೂಡ ಕಬ್ಜ ಚಿತ್ರಕ್ಕೆ ವರದಾನವಾಗಿದೆ.